ವಿರಾಜಪೇಟೆ: ಕೂಂಬಿಂಗ್ ಕಾರ್ಯಾಚರಣೆ ವೇಳೆ ಅರಣ್ಯ ವೀಕ್ಷಕ ನಾಪತ್ತೆ

Update: 2022-09-24 15:52 GMT
ಪವನ್ - ನಾಪತ್ತೆಯಾದ ಸಿಬ್ಬಂದಿ

ಮಡಿಕೇರಿ ಸೆ.24 : ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕನೋರ್ವ ನಾಪತ್ತೆಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಬಾಳೆಲೆ ಗ್ರಾಮದ ನಿವಾಸಿ ಪವನ್(23) ನಾಪತ್ತೆಯಾದ ಅರಣ್ಯ ವೀಕ್ಷಕನಾಗಿದ್ದು, ಕಾಲು ಜಾರಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮಾಕುಟ್ಟ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುವ ವಿ.ಬಾಡಗ ಗ್ರಾಮದಲ್ಲಿ ಕಾಡಾನೆ ಕಾರ್ಯಾಚರಣೆಗಾಗಿ ಅರಣ್ಯ ವೀಕ್ಷಕ ಪವನ್ ಮತ್ತು ಇತರ ನಾಲ್ವರ ತಂಡ ಸೆ.23ರ ಸಂಜೆ ವೇಳೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಪವನ್ ದಿಢೀರ್ ಆಗಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.  

ಅರಣ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಬಿಟ್ಟಾಂಗಲ ಗ್ರಾ.ಪಂ ಸದಸ್ಯರು ಸೇರಿದಂತೆ  ಸ್ಥಳೀಯರು ನಾಪತ್ತೆಯಾದ ಪವನ್‍ಗಾಗಿ ಸಂಜೆ ಕತ್ತಲಿನವರೆಗೆ ಹುಡುಕಾಟ ನಡೆಸಿದ್ದಾರೆ. ಆದರೆ ಪವನ್ ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಪಕ್ಕದಲ್ಲಿ ಹರಿಯುತ್ತಿರುವ ನದಿಯಲ್ಲಿ ಆತ ಕಾಲುಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳದಲ್ಲಿ ಎನ್.ಡಿ.ಆರ್.ಎಫ್, ಅಗ್ನಿ ಶಾಮಕ ದಳ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಮೊಖಾಂ ಹೂಡಿದ್ದು, ನಾಳೆಯೂ ಶೋಧ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

► ಪೋಷಕರ ಆಕ್ರಂದನ

ಪವನ್ ನಾಪತ್ತೆಯಾಗಿರುವ ಬಗ್ಗೆ ಸೆ.23ರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಆತನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳ್ಕಕೆ ಬಂದ ಆತನ ಪೋಷಕರು  ತಮ್ಮನ್ನು ಕೂಡ ಅರಣ್ಯದೊಳಗೆ ತೆರಳಲು ಅವಕಾಶ ನೀಡುವಂತೆ ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳಲ್ಲಿ   ಮನವಿ ಮಾಡಿದರು. ಮಾಕುಟ್ಟ ದಟ್ಟ ಅರಣ್ಯವಾಗಿದ್ದು, ಪವನ್ ನಾಪ್ತತೆಯಾದ ಪ್ರದೇಶ ದುರ್ಗಮ ಸ್ಥಳವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳುವುದು ಸೂಕ್ತವಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News