‘ಡರ್ಟಿ ಪಾಲಿಟಿಕ್ಸ್’ ಹೇಳಿಕೆ: ಸಿಎಂ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Update: 2022-09-27 16:30 GMT

ಬೆಂಗಳೂರು, ಸೆ.27: ‘ಪೇ ಸಿಎಂ’ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಕ್ಷವು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ‘ಯಾರದ್ದು ಡರ್ಟಿ ಪಾಲಿಟಿಕ್ಸ್?’ ಎಂದು ಟ್ವೀಟ್‍ಗಳ ಮೂಲಕ ಮುಖ್ಯಮಂತ್ರಿ ಎದುರು ಪ್ರಶ್ನೆಗಳನ್ನಿಟ್ಟಿದೆ.

ಯಾರದ್ದು ಡರ್ಟಿ ಪಾಲಿಟಿಕ್ಸ್ ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ? ಕುರ್ಚಿ ಉಳಿಸಿಕೊಳ್ಳುವ ಏಕೈಕ ಕಾರಣಕ್ಕೆ ಸಂಘಪರಿವಾರದ ಅಣತಿಯಂತೆ ಮಕ್ಕಳ ಪಠ್ಯದಲ್ಲೂ ರಾಜಕೀಯ ಅಜೆಂಡಾ ತೂರಿಸಿದ್ದು, ನಾಡಿನ ಮಹನೀಯರಿಗೆ ಅವಮಾನ ಎಸಗಿದ್ದು ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಪಠ್ಯಪುಸ್ತಕಗಳಲ್ಲಿ ರಾಜಕೀಯ ಹಿತಾಸಕ್ತಿ ತೂರಿಸುವುದಕ್ಕಿಂತ ಬೇರೆ ಡರ್ಟಿ ಪಾಲಿಟಿಕ್ಸ್ ಇದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರಾಜಕೀಯ ಹಿತಾಸಕ್ತಿಗೊಸ್ಕರ ಹಿಜಾಬ್ ಹೆಸರಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಕಿತ್ತುಕೊಂಡಿದ್ದು, ಸಿಎಂ ಹುದ್ದೆಯ ಜವಾಬ್ದಾರಿ ಮರೆತು ಆಕ್ಷನ್‍ಗೆ ರಿಯಕ್ಷನ್ ಸಹಜ ಎನ್ನುವ ಮೂಲಕ ಸಮಾಜಘಾತುಕರಿಗೆ ಬೆಂಬಲಿಸಿದ್ದು, ಕೋಮು ಕಲಹಗಳನ್ನು ಹಬ್ಬಿಸಿ ಕಣ್ಮುಚ್ಚಿ ಕುಳಿತಿದ್ದು, ಇದು ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ? ಎಂದು ಕಾಂಗ್ರೆಸ್ ಕಿಡಿಗಾರಿದೆ.

ಯಾರದ್ದು ಡರ್ಟಿ ಪಾಲಿಟಿಕ್ಸ್ ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ? ತಮ್ಮ ಸರಕಾರದ ಭ್ರಷ್ಟಾಚಾರ, ವೈಫಲ್ಯಗಳನ್ನು ಜನಮಾನಸದಿಂದ ಮರೆಮಾಚಲು ವಾರಕ್ಕೊಂದು ಕೋಮು ವಿವಾದ ಸೃಷ್ಟಿಸಿ ಸಮಾಜವನ್ನು ಒಡೆದಿದ್ದು. ಪ್ರಜಾಪ್ರಭುತ್ವ ಹಾಗೂ ಸಂವಿಧಾನಗಳ ಆಶಯಕ್ಕೆ ವಿರುದ್ಧವಾದ ಶಕ್ತಿಗಳಿಗೆ ‘ಮೌನ'ದಿಂದ ಬೆಂಬಲಿಸಿದ್ದು ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಡರ್ಟಿ ಪಾಲಿಟಿಕ್ಸ್ ಯಾರದ್ದು, ಆತ್ಮಾವಲೋಕ ಮಾಡಿಕೊಳ್ಳಿ ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಪಕ್ಷಕ್ಕೆ ಹಗಲಿರುಳು ದುಡಿದ ಲಿಂಗಾಯತ ಸಮುದಾಯದ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನ ಕಾರಣವನ್ನೇ ಹೇಳದೆ, ಸರಕಾರದ 2ನೇ ವರ್ಷದ ಸಂಭ್ರಮದಲ್ಲೇ ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿದ್ದು, ಬಿಜೆಪಿಯ ಉನ್ನತ ನಾಯಕನನ್ನು ಮೂಲೆಗುಂಪು ಮಾಡಿದ್ದು ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಎಂದು ಕಾಂಗ್ರೆಸ್ ಕೇಳಿದೆ.

ಯಾರದ್ದು ಡರ್ಟಿ ಪಾಲಿಟಿಕ್ಸ್? ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಹೊರಿಸುವ ಷಡ್ಯಂತ್ರ ರೂಪಿಸಿದ್ದು, ತಾವೇ ಬಿಜೆಪಿ ಹೈಕಮಾಂಡಿಗೆ ಕಪ್ಪ ಕೊಟ್ಟಿದ್ದನ್ನ ಒಪ್ಪಿದ್ದು, ಸುಳ್ಳು ಆರೋಪ ಹಿಡಿದು ಜಗ್ಗಾಡಿ, ತಮ್ಮ ಹುಳುಕು ಹೊರಬಂದಾಗ ಸದನದಲ್ಲಿ ಗಪ್ ಚುಪ್ ಆಗಿದ್ದು. ಈ ಎಲ್ಲ ಬಿಜೆಪಿ ಡರ್ಟಿ ಪಾಲಿಟಿಕ್ಸ್ ನೆನಪಿದೆಯೇ ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಡರ್ಟಿ ಪಾಲಿಟಿಕ್ಸ್ ಯಾರದ್ದು ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಅಂಬೇಡ್ಕರ್‍ರವರು ಬರೆದ ಸಂವಿಧಾನದ ವಿರುದ್ಧವಾಗಿ ಆಪರೇಷನ್ ಕಮಲ ಮಾಡಿ ಅಸಂವಿಧಾನಿಕ ಸರಕಾರ ರಚಿಸಿದ್ದು, ಮುಂಬೈ ಹೋಟೆಲ್‍ನಲ್ಲಿಟ್ಟು ಹನಿಟ್ರಾಪ್, ಸಿಡಿ ಮಾಡಿ ಬ್ಲಾಕ್‍ಮೇಲ್ ಮಾಡಿದ್ದು, ಆಪರೇಷನ್ ಕಮಲಕ್ಕೆ 1000 ಕೋಟಿ ರೂ.ಖರ್ಚು ಮಾಡಿದ್ದು, ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಎಂದು ಕಾಂಗ್ರೆಸ್ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News