2014–15ನೇ ಸಾಲಿನ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ: ಬಂಧಿತರಿಂದ ಲಿಖಿತ ಹೇಳಿಕೆ ದಾಖಲು.!

Update: 2022-09-27 16:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.27: 2014–15ನೆ ಸಾಲಿನ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೇರಿದಂತೆ ಆರು ಮಂದಿ ವಿಚಾರಣೆ ನಡೆಸಿರುವ ಸಿಐಡಿ ಅಧಿಕಾರಿಗಳು, ಅವರಿಂದ ಲಿಖಿತ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

ಬಂಧಿತರ ಪ್ರಮುಖವಾಗಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಂ.ಪಿ.ಮಾದೇಗೌಡ, ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ, ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಕೆ. ಶಿವಕುಮಾರ್, ಕೆ.ರತ್ನಯ್ಯ, ಜಿ.ಆರ್. ಬಸವರಾಜ್ ಹಾಗೂ ಕಂಪ್ಯೂಟರ್ ಪ್ರೋಗಾಮರ್ ನರಸಿಂಹರಾವ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

ಬಂಧಿತರ ಮೇಲಿನ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಮುಂದಿಟ್ಟುಕೊಂಡೇ, ಬಂಧಿತ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಲಿಖಿತ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಿಐಡಿ ಅಧಿಕಾರಿವೊಬ್ಬರು ಮಾಹಿತಿ ನೀಡಿದರು.

ಏನಿದು ಪ್ರಕರಣ?: 2012-13ನೆ ಮತ್ತು 2014-15ನೆ ಸಾಲಿನಲ್ಲಿ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, 15 ಶಿಕ್ಷಕರು ಮತ್ತು ಎಫ್‍ಡಿಎ ಪ್ರಸಾದ್ ಎಂಬಾತನ್ನು ಬಂಧಿಸಿತ್ತು.

ಆನಂತರ, ಹೆಚ್ಚಿನ ತನಿಖೆ ಸಲುವಾಗಿ ಪ್ರಸಾದ್‍ನನ್ನು ಕಸ್ಟಡಿಗೆ ಪಡೆದು ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ನೇಮಕಾತಿ ಇಡೀ ರಾಜ್ಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿತ್ತು. 

ಪ್ರತಿ ಅಭ್ಯರ್ಥಿಯಿಂದ 10 ರಿಂದ 15 ಲಕ್ಷ ರೂ. ಪಡೆದು ನೌಕರಿ ಕೊಡಿಸುವುದು ಬೆಳಕಿಗೆ ಬಂದಿತ್ತು. ಇದರ ಜಾಡು ಹಿಡಿದು ತನಿಖೆ ಮುಂದುವರಿಸಿದ ಸಿಐಡಿ ಅಧಿಕಾರಿಗಳು, ಶಿಕ್ಷಣ ಇಲಾಖೆ ನೇಮಕಾತಿ ವಿಭಾಗದ ಬೆಂಗಳೂರು ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಂಟಿ ನಿರ್ದೇಶಕರು ಅಕ್ರಮ ಎಸಗಿರುವುದು ಸಾಕ್ಷ್ಯ ಸಮೇತ ದೃಢವಾಗಿತ್ತು. ಇದರ ಆಧಾರದ ಮೇಲೆ ಸಿಐಡಿ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News