ಗೃಹ ಸಚಿವಾಲಯದಿಂದ ಪಿಎಫ್‍ಐ ನಿಷೇಧ ಬಳಿಕ ಎಸ್‍ಡಿಪಿಐ ಮೇಲೆ ಚುನಾವಣಾ ಆಯೋಗ ಕಣ್ಣು

Update: 2022-09-29 01:55 GMT

ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಸಹವರ್ತಿ ಸಂಸ್ಥೆಗಳನ್ನು ನಿಷೇಧಿಸುವ ವೇಳೆ ಕೇಂದ್ರ ಗೃಹ ಸಚಿವಾಲಯ ಪಿಎಫ್‍ಐ ರಾಜಕೀಯ ಮುಖವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿಲ್ಲ. ಆದರೆ ಪಿಎಫ್‍ಐ ಮತ್ತು ಇತರ ನಿಷೇಧಿತ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಎಸ್‍ಡಿಪಿಐ ಮುಖಂಡರು ಕೂಡಾ ಇಂಥದ್ದೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ timesofindia.com ವರದಿ ಮಾಡಿದೆ.

ಎಸ್‍ಡಿಪಿಐ ನೋಂದಾಯಿತ ರಾಜಕೀಯ ಪಕ್ಷವಾಗಿದ್ದು, ಭಾರತದ ಸಂವಿಧಾನಕ್ಕೆ ಬದ್ಧವಾಗಿ ನೋಂದಣಿಯಾಗಿರುವುದರಿಂದ ನಿಷೇಧದಿಂದ ಅದನ್ನು ಹೊರಗಿಡಲಾಗಿದೆ. ಆದರೆ ಯಾವುದೇ ಎಸ್‍ಡಿಪಿಐ ಸದಸ್ಯರು ಪಿಎಫ್‍ಐ ಪರವಾಗಿ ಕಾರ್ಯ ನಿರ್ವಹಿಸಿದರೆ, ದೇಶವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡರೆ, ಕೋಮು ದ್ವೇಷ ಹರಡಿದರೆ, ಸಂಶಯಾಸ್ಪದ ವಿಧಾನದಲ್ಲಿ ನಿಧಿ ಸಂಗ್ರಹಿಸಿದರೆ, ಜನರನ್ನು ಪ್ರಚೋದಿಸಲು ಪ್ರಯತ್ನ ಮಾಡಿದರೆ ಯುಎಪಿಎ ಸೇರಿದಂತೆ ಸೂಕ್ತ ಕಾನೂನುಗಳಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಗೃಹಸಚಿವಾಲಯದಿಂದ ಮಾಹಿತಿ ಪಡೆದು ಮತ್ತು ಪಿಎಫ್‍ಐ ನಿಷೇಧ ಅಧಿಸೂಚನೆ ಆಧರಿಸಿ ಎಸ್‍ಡಿಪಿಐ ವಿರುದ್ಧ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಎಸ್‍ಡಿಪಿಐ ಈಗಾಗಲೇ 2018-19 ಮತ್ತು 2019-20ರ ಸಾಲಿನಲ್ಲಿ ಸ್ವೀಕರಿಸಿದ ದೇಣಿಗೆಯ ವರದಿ ನೀಡಲು ವಿಫಲವಾಗಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News