PSI ನೇಮಕಾತಿ ಹಗರಣ | ಧಮ್ಮು, ತಾಕತ್ತು ಇದ್ದರೆ ಮಾಜಿ ಸಿಎಂ ಪುತ್ರಯಾರೆಂದು ತನಿಖೆ ಮಾಡಿಸಿ: ಕಾಂಗ್ರೆಸ್ ಸವಾಲು

Update: 2022-10-05 14:13 GMT

ಬೆಂಗಳೂರು, ಅ.5: ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೆಸರು ಬಂದರೂ ತನಿಖೆ ಇಲ್ಲ, ಬಿಜೆಪಿ ಶಾಸಕ ಬಸವರಾಜ್ ದಡೇಸಗೂರರ ಬಗ್ಗೆ ಸಾಕ್ಷ್ಯ ಸಿಕ್ಕರೂ ತನಿಖೆ ಇಲ್ಲ, ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಸ್ವತಃ ಬಿಜೆಪಿಯ ಶಾಸಕ ಯತ್ನಾಳ್ ಹೇಳಿದರೂ ತನಿಖೆ ಇಲ್ಲ. ‘ಪೇ ಸಿಎಂ’ ಎಂದರೆ ಉರಿದುಕೊಳ್ಳುವ ಬಸವರಾಜ ಬೊಮ್ಮಾಯಿ ಅವರೇ, ದಮ್ಮು-ತಾಕತ್ತು ಇದ್ರೆ ಮಾಜಿ ಸಿಎಂ ಪುತ್ರ ಯಾರೆಂದು ತನಿಖೆ ಮಾಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಪೇ ಸಿಎಂ’ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಶಾಸಕರಾದ ಯತ್ನಾಳ್ ಪಿಎಸ್ಸೈ ನೇಮಕಾತಿ ಅಕ್ರಮದ ಬಗ್ಗೆ ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ, ಪರೇಶ್ ಮೇಸ್ತಾ ಪ್ರಕರಣದಲ್ಲಿ ನಿಮ್ಮ ಪಕ್ಷದವರು ಸಿಬಿಐಯನ್ನೂ ನಂಬದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ನ್ಯಾಯಾಂಗ ತನಿಖೆಗಾದರೂ ವಹಿಸಿ ಯತ್ನಾಳ್‍ರ ಸವಾಲು ಸ್ವೀಕರಿಸಿ. 40 ಪರ್ಸೆಂಟ್ ಸರಕಾರದ ತನಿಖೆ ಬಗ್ಗೆ ಅವರಿಗೂ ನಂಬಿಕೆ ಇಲ್ಲ ಎಂದು ಟೀಕಿಸಿದೆ.

‘ಪೇ ಸಿಎಂ’ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಯತ್ನಾಳ್ ಪಿಎಸ್ಸೈ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹೀಗಿದ್ದರೂ ಅವರಲ್ಲಿ ದಾಖಲೆ ಕೇಳುತ್ತಿಲ್ಲವೇಕೆ? ನೋಟಿಸ್ ನೀಡಿ ವಿಚಾರಣೆ ಮಾಡಲಿಲ್ಲವೇಕೆ? ಆ ಮಾಜಿ ಸಿಎಂ ಪುತ್ರ ಸಿಕ್ಕಿಬಿದ್ದರೆ ನಿಮ್ಮ ಕುರ್ಚಿ ಕಳೆದುಕೊಳ್ಳುವ ಭಯವೇ? ಎಂದು ಕಾಂಗ್ರೆಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News