ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್‍ಗಳಿಗೆ ಉಚಿತ ವಿದ್ಯುತ್: ಕುಮಾರಸ್ವಾಮಿ ಘೋಷಣೆ

Update: 2022-10-06 11:26 GMT

ಬೆಂಗಳೂರು, ಅ. 6: ತೆಲಂಗಾಣ ಮಾದರಿಯಲ್ಲಿಯೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಗುರುವಾರ ನಗರದಲ್ಲಿರುವ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಅಂಶವನ್ನು ಚುನಾವಣಾ ಪ್ರಣಾಳಿಕೆಯಲ್ಲಿಯೂ ಸೇರಿಸಲಾಗುವುದು.ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಸಕ್ತಿ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ನೇತೃತ್ವದ  ಬಿಆರ್‍ಎಸ್ ಪಕ್ಷಕ್ಕೆ ಇಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿಗಳನ್ನೇ ಬೆಂಬಲಿಸುವ ನಿರ್ಧಾರಕ್ಕೆ ತೆಲಂಗಾಣ ಮುಖ್ಯಮಂತ್ರಿ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.

2024ರ ಲೋಕಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು  ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಸಿಆರ್ ಚಿಂತನೆ ನಡೆಸಿದ್ದಾರೆ. ಅದರಂತೆ ರಾಜ್ಯದ ಗಡಿ ಭಾಗದಲ್ಲಿ ಕೆಲ  ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಿದ್ದಾರೆ. ದಲಿತರ ಮೇಲಿನ ದೌರ್ಜನ್ಯ, ರೈತರ ನೆರವಿಗೆ ಧಾವಿಸುವ ಸಲುವಾಗಿ ನಾವು ಒಗ್ಗೂಡುತ್ತಿದ್ದೇವೆ. ಅದನ್ನೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮಾಡಿಕೊಂಡು ಮುಂದುವರಿಯುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ರೈತಬಂಧು ಯಾಜನೆ ಜಾರಿ: ತೆಲಂಗಾಣದಲ್ಲಿ ಜಾರಿ ಮಾಡಲಾಗಿರುವ ರೈತಬಂಧು, ದಲಿತ ಬಂಧು ಯೋಜನೆಗಳನ್ನು ರಾಜ್ಯದಲ್ಲಿಯೂ ಜಾರಿಗೆ ತರಲಾಗುವುದು. ರೈತಬಂಧು ಯೋಜನೆಯಡಿ 24 ಗಂಟೆ ಉಚಿತ ವಿದ್ಯುತ್, ಪ್ರತಿ ವರ್ಷ ಎಕರೆಗೆ ಹತ್ತು ಸಾವಿರ ಸಹಾಯ ಧನ ಕೊಡಲಾಗುತ್ತಿದೆ. ರೈತ ಅಕಾಲಿಕ ಮರಣಕ್ಕೀಡಾದರೆ ತಕ್ಷಣ 5 ಲಕ್ಷ ರೂ. ವಿಮಾ ಪರಿಹಾರ ತಲುಪಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ದಲಿತರಿಗೆ ಕುಟುಂಬದಲ್ಲಿಯೇ ಸ್ವ ಉದ್ಯೋಗ ಮಾಡಲು 10 ಲಕ್ಷ ರೂ.ನೆರವನ್ನು ನೀಡಲಾಗುತ್ತಿದೆ. ಪ್ರತಿ ಜಿಲ್ಲೆಯಿಂದ ಕೆಲ ಸಂಘಟನೆ, ಪ್ರಗತಿ ಪರ ರೈತರು, ದಲಿತ ಸಂಘಟನೆ ಮುಖಂಡರನ್ನ ತೆಲಂಗಾಣಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿ. ಈ ಮೂಲಕ ನಿಮ್ಮ ಚುನಾವಣಾ ಪ್ರಚಾರಕ್ಕೆ ಈ ಅಂಶಗಳನ್ನು ಅಳವಡಿಸಿಕೊಳ್ಳಿ ಎಂದು ಕೆಸಿಆರ್ ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.

ನಾನು ರಾಷ್ಟ್ರಮಟ್ಟದ ರಾಜಕೀಯಕ್ಕೆ ಹೋಗಲು ನಮ್ಮದು ಸಣ್ಣ ಪಕ್ಷ. ನಮಗೆ ಸಾಗುವಳಿ ಚೀಟಿ ಸಿಕ್ಕಿರುವುದು ಕರ್ನಾಟಕದ್ದು ಮಾತ್ರ. ಹೀಗಾಗಿ ನಾವು ಹೊರಗೆ ಬಕರ್ ಹುಕುಂ ಜಾಗ ಹುಡುಕುವುದಕ್ಕೆ ಆಗುತ್ತಾ ಎಂದ ಅವರು, ಕರ್ನಾಟಕ ಚುನಾವಣೆ ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರುತ್ತದೆ ಎಂದರು.

ರಾಜ್ಯದಲ್ಲಿ 15-20 ಕ್ಷೇತ್ರಗಳ ಮೇಲೆ ಕೆಸಿಆರ್ ಪ್ರಭಾವ ಇರಬಹುದು. ಹೈದರಾಬಾದ್ ಕರ್ನಾಟಕದಲ್ಲಿ ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ ನಾವು 15-20 ಕ್ಷೇತ್ರ ಕಲ್ಯಾಣ ಕರ್ನಾಟಕದಲ್ಲಿ ಗೆಲ್ಲಬಹುದು. ಅಲ್ಲಿ ನಮ್ಮ ಪಕ್ಷದ ಸಂಘಟನೆ ಉತ್ತಮವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಜೋಡೋ: ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದಾಗ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ರಾಹುಲ್ ಗಾಂಧಿ ನಗಾರಿ ಬಾರಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋಗಿ ಅಂತ ಪದೇ ಪದೇ ಹೇಳುತ್ತಿದ್ದಾರೆ. ಈ ಪಾದಯಾತ್ರೆ ಮೇಲೆ ಚುನಾವಣೆ ನಡೆಯಲ್ಲ ಎಂದು ಅವರು ವ್ಯಂಗ್ಯವಾಡಿದರು.

ಪಕ್ಷ ನೆಲ ಕಚ್ಚಿದ ಮೇಲೆ ಖರ್ಗೆಗೆ ಸ್ಥಾನ: ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಾರು ಇಲ್ಲದ ಸಂದರ್ಭದಲ್ಲಿ, ಪಕ್ಷ ನೆಲ ಕಚ್ಚಿರುವ ವೇಳೆ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ಕೂರಿಸಲು ಹೊರಟಿದ್ದಾರೆ ಎಂದು ಟೀಕಿಸಿರು. 

ಅಭ್ಯರ್ಥಿಗಳ ಕಾರ್ಯಾಗಾರ: ಅ.17 ಮತ್ತು 18 ರಂದು ಅಭ್ಯರ್ಥಿಗಳ ಕಾರ್ಯಾಗಾರ ಇಟ್ಟುಕೊಂಡಿದ್ದೇವೆ. ರಾಜ್ಯದ 130 ಕ್ಷೇತ್ರ ಗೆಲ್ಲಲು ಶ್ರಮ ವಹಿಸುತ್ತಿದ್ದೇವೆ. ಒಂದಿಷ್ಟು ಕ್ಷೇತ್ರಗಳಲ್ಲಿ ಎರಡು, ಮೂರು ಜನ ಅಭ್ಯರ್ಥಿಗಳು ಇದ್ದಾರೆ. ಹೀಗಾಗಿ ಅವರೊಟ್ಟಿಗೂ ಹಾಗೂ ಕ್ಷೇತ್ರದ ಮುಖಂಡರ ಜೊತೆಗೂ ಚರ್ಚೆ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News