ನ.1ರಿಂದ ಜೆಡಿಎಸ್ ಜನತಾ ಪಂಚರತ್ನ ಯಾತ್ರೆ: ಕುಮಾರಸ್ವಾಮಿ

Update: 2022-10-06 13:02 GMT

ಬೆಂಗಳೂರು, ಅ.6: ಹಳೇ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇವೆ. ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ನ.1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ಗುರುವಾರ ನಗರದಲ್ಲಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ಪೂರ್ವ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ. ಇದಕ್ಕಾಗಿ ವಾಹನಗಳು ಸಿದ್ಧಗೊಳ್ಳುತ್ತಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಸಂಘಟನೆ ಆರಂಭಿಸಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಏನು ಎಂಬುದನ್ನು ಈ ಕಾರ್ಯಕ್ರಮಗಳ ಮೂಲಕ ತೋರಿಸುತ್ತೇವೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಜೆಡಿಎಸ್ ಪರ ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.

ಅ.8ರಂದು ಜನತಾ ಮಿತ್ರ ಸಮಾರೋಪ: ಅ.8ಕ್ಕೆ ಜನತಾಮಿತ್ರ ಸಮಾರೋಪ ಸಮಾರಂಭ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ  ಆಯೋಜಿಸಿದ್ದೇವೆ. ಈ ಸಂಬಂಧ ಪೂರ್ವ ಸಿದ್ಧತೆಗಾಗಿ ಚರ್ಚೆ ಮಾಡಲು ಬೆಂಗಳೂರು ನಗರ ಘಟಕದ ಪದಾಧಿಕಾರಿಗಳ ಸಭೆ ಕರೆದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಸಿಎಂ ವಿರುದ್ಧ ವಾಗ್ದಾಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಬುದ್ಧತೆ ಇದೆಯೇ? ಶಾಸಕರ ಶಿಷ್ಟಾಚಾರ ನೀವೆ ಮಾಡಿದ್ದು, ಆದರೆ ಈಗ ಏನಾಯಿತು. ಕಲಾವಿದರ ಕೋಟಾದಿಂದ ಬಂದವರಿಗೆ 50 ಕೋಟಿ ಅನುದಾನ ಕೊಡುವುದೆಂದರೆ ಹೇಗೆ?. ಕಾರ್ಯಕ್ರಮ ರದ್ದಾಗಿದೆ ಅಂತ ಹಿಂದಿನ ದಿನ ಹೇಳಿದ್ದಾರೆ. ಆದರೆ ಮತ್ತೆ ಯಾಕೆ ಕಾರ್ಯಕ್ರಮ ಮಾಡಿದರು ಎಂದು ಇತ್ತೀಚೆಗೆ ರಾಮನಗರದಲ್ಲಿ ಆದ ಘಟನೆ ಬಗ್ಗೆ ಅವರು ವಾಗ್ದಾಳಿ ನಡೆಸಿದರು.

ಸರಕಾರಿ ಕಾರ್ಯಕ್ರಮ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕು. ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಕಲ್ಲು ತೂರಾಟ ಯಾಕೆ ಆಯ್ತು. ಬೇರೊಂದು ಕಾರ್ಯಕ್ರಮಕ್ಕೆ ಬೇರೆ ಮಾರ್ಗದಲ್ಲಿ ಹೋಗಬಹುದಿತ್ತು. ಶಾಂತಿಯುತವಾಗಿ ಇದ್ದವರನ್ನು ಲಾಠಿ ಚಾರ್ಜ್ ಮಾಡಿದ್ದು ಪೆÇಲೀಸರು. ಗಲಭೆ ಸೃಷ್ಟಿ ಮಾಡಿದ್ದು ಯಾರು? ತಾಕತ್ ಇದೆ ಅನ್ನುವ ಭಾಷಣ ಮಾಡಿದರಲ್ಲಾ, ನಿಮ್ಮ ಶಾಸಕರನ್ನು ಹದ್ದು ಬಸ್ತಿನಲ್ಲಿ ಇಡದೇ ನನ್ನ ಬಗ್ಗೆ ಮಾತಾಡ್ತೀರಾ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News