RPG ದಾಳಿ ಆರೋಪಿ ಸಲ್ಮಾನ್ ಖಾನ್ ಹತ್ಯೆಗೂ ಸಂಚು ರೂಪಿಸಿದ್ದ: ದೆಹಲಿ ಪೊಲೀಸರು

Update: 2022-10-08 02:17 GMT

ಹೊಸದಿಲ್ಲಿ: ಪಂಜಾಬ್ ಪೊಲೀಸ್ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ಮೇ 9ರಂದು ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ (RPG) ದಾಳಿ ನಡೆಸಿದ ಆರೋಪದಲ್ಲಿ 17 ವರ್ಷದ ಬಾಲಕನನ್ನು ಬಂಧಿಸಲಾಗಿದ್ದು, ಈತ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೂ ಸಂಚು ರೂಪಿಸಿದ್ದ ಎಂಬ ಅಂಶವನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.

ಈ ಬಾಲಾಪರಾಧಿಗೆ ಸಲ್ಮಾನ್ ಖಾನ್ ಅವರನ್ನು ಮುಗಿಸುವ ಕಾರ್ಯವನ್ನು ಕೂಡಾ ವಹಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಆಗಸ್ಟ್ 4ರಂದು ಹರ್ಯಾಣದಲ್ಲಿ ಸುಧಾರಿತ ಸ್ಫೋಟಕ ಸಾಧನ (ಇಐಡಿ) ಹೊಂದಿದ್ದ ಸಂಬಂಧ 23 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿತ್ತು. ಇಬ್ಬರನ್ನೂ ಗುರುವಾರ ಸಂಜೆ ಗುಜರಾತ್‍ನ ಜಾಮ್‍ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಂಜಾಬ್ ಪೊಲೀಸ್ ಗುಪ್ತಚರ ವಿಭಾಗದ ಕೇಂದ್ರ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಬಬ್ಬರ್ ಖಾಲ್ಸಾ ಇಂಟರ್‍ನ್ಯಾಷನಲ್ ((BKI) ಹಾಗೂ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಸ್ಥಳೀಯ ಗ್ಯಾಂಗ್‍ಸ್ಟರ್ ಗಳ ಕೈವಾಡ ಇದೆ ಎಂದು ಪಂಜಾಬ್ ಪೊಲೀಸರು ಆಪಾದಿಸಿದ್ದರು. ಈ ದಾಳಿಯ ಯೋಜನೆ ರೂಪಿಸಲು ಮತ್ತು ಲಾಜಿಸ್ಟಿಕ್ ಬೆಂಬಲ ಒದಗಿಸಿದ ಆರೋಪದಲ್ಲಿ ಆರು ಮಂದಿಯನ್ನು ಈಗಾಗಲೇ ಬಂಧಿಸಲಾಗಿತ್ತು.

ಉತ್ತರ ಪ್ರದೇಶದ ಫೈಝಾಬಾದ್‍ನ ನಿವಾಸಿಯಾಗಿರುವ ಬಾಲಾಪರಾಧಿ ಹಾಗೂ ಈಗ ತಲೆ ಮರೆಸಿಕೊಂಡಿರುವ ಹರ್ಯಾಣದ ಸುರಖ್‍ಪುರದ ದೀಪಕ್ ಎಂಬವರು ಆರ್‍ಪಿಜಿ ದಾಳಿ ನಡೆಸಿದ್ದರು ಎಂದು ವಿಶೇಷ ಪೊಲೀಸ್ ಆಯುಕ್ತ ಎಚ್‍ಜಿಎಸ್ ದಿಲ್ವಾಲ್ ಹೇಳಿದ್ದಾರೆ.

ಬಂಧಿತನಾಗಿರುವ ಬಾಲಕ, ದೀಪಕ್ ಹಾಗೂ ಈಗಾಗಲೇ ಜೈಲಿನಲ್ಲಿರುವ ಮೋನು ಡಗಾರ್ ಎಂಬವರಿಗೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯಿ ಹಾಗೂ ಜಗ್ಗು ಭಗವಾನ್‍ಪುರಿಯಾ ಕಾರ್ಯ ವಹಿಸಿದ್ದರು ಎಂದು ಅವರು ವಿವರಿಸಿದ್ದಾರೆ. ಇಬ್ಬರೂ ಗ್ಯಾಂಗ್‍ಸ್ಟರ್‍ಗಳು ಇದೀಗ ಜೈಲಿನಲ್ಲಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News