ಗಣಿ ಕಾರ್ಮಿಕರ ಪುನರ್ ವಸತಿಗಾಗಿ ಆಗ್ರಹ: ಸಂಡೂರಿನಿಂದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ

Update: 2022-10-11 14:17 GMT

ಬೆಂಗಳೂರು, ಅ. 11: 'ಗಣಿ ಕಾರ್ಮಿಕರ ಪುನರ್ ವಸತಿಗಾಗಿ ನಡೆಯುತ್ತಿರುವ ಈ ಹೋರಾಟವು ನರ್ಮದಾ ನದಿ ಉಳಿವಿಗಾಗಿ ನಡೆದಿದ್ದ ಹೋರಾಟದಂತೆ ಸುದೀರ್ಘವಾಗಿದೆ. ಜೀವನೋಪಾಯಕ್ಕಾಗಿ ಮಾಡುತ್ತಿರುವ ಈ ಪಾದಯಾತ್ರೆಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ' ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ತಿಳಿಸಿದ್ದಾರೆ.

ಮಂಗಳವಾರ ಗಣಿ ಕಾರ್ಮಿಕರ ಪುನರ್ ವಸತಿಗಾಗಿ ಆಗ್ರಹಿಸಿ ಬಳ್ಳಾರಿಯಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್(ಎಐಸಿಸಿಟಿಯು) ನೇತೃತ್ವದಲ್ಲಿ ಆಯೋಜಿಸಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

''ಸ್ವತಂತ್ರ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿ ನಮ್ಮನ್ನು ಗುಲಾಮರನ್ನಾಗಿ ಮಾಡಿತ್ತು. ಆದರೆ ಸ್ವತಂತ್ರ ಬಂದರೂ ಈಗ ನಾವು ಗುಲಾಮಗಿರಿಯ ಸ್ಥಿತಿಯಲ್ಲಿದ್ದೇವೆ. ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳು ಕಾರ್ಮಿಕರ ದುಡಿಮೆಯಿಂದ ಶ್ರೀಮಂತರಾಗಿದ್ದಾರೆ. ಈ ದೇಶದಲ್ಲಿ ಸಕಾರಾತ್ಮಕ ಬದಲಾವಣೆ ಆಗಬೇಕಾದರೆ ಇಂತಹ ಹೋರಾಟಗಳು ನಡೆಯಬೇಕು'' ಎಂದು ಅವರು ಹೇಳಿದರು.

''ಬಳ್ಳಾರಿಯಂತಹ ಜಾಗದಲ್ಲಿ ನಡೆಯುತ್ತಿರುವ ಈ ಹೋರಾಟವು ಅತ್ಯಂತ ಕಷ್ಟಕರವಾದ ಹೋರಾಟವಾಗಿದೆ. ಇಂದು ಜಲ, ಅರಣ್ಯ ಮತ್ತು ಜಮೀನು ಖಾಸಗೀಕರಣವಾಗಿ ಮಾರ್ಪಟ್ಟಿರುವ ಕಾರಣ ಗಣಿ ಮಾಫಿಯಾ ಮಾಡಿದ ಅನ್ಯಾಯವು ಎಂತಹದ್ದು ಎಂದು ಎಲ್ಲರಿಗೂ ತಿಳಿದಿದೆ. ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ನೀಡಿರುವ ವರದಿಯಲ್ಲಿ ಗಣಿ ಮಾಲಕರ ಶೋಷಣೆಯನ್ನು ವಿವರಿಸಿದ್ದಾರೆ. ಕಾರ್ಮಿಕ ಶ್ರಮದ ಲೂಟಿಗೆ ಅವಕಾಶ ನೀಡಿದ ಇಲಾಖೆಗಳನ್ನೂ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ'' ಎಂದು ಅವರು ಮಾಹಿತಿ ನೀಡಿದರು.

''ಕೇಂದ್ರ ಸರಕಾರವು ಕಾರ್ಮಿಕರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲು ಕಾರ್ಮಿಕ ಸಂಹಿತೆಗಳು ಜಾರಿಗೊಳಿಸಿದೆ. ದೇಶದಲ್ಲಿ ಎಲ್ಲವನ್ನೂ ಖಾಸಗೀಕರಣ ಮಾಡಿದ್ದರಿಂದ ಖಾಯಂ ಆಗಿದ್ದ ಅನೇಕ ಕಾರ್ಮಿಕರನ್ನು ಈಗ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವಂತಾಗಿದೆ. ಇದು ಸಂಪೂರ್ಣ ಹಿಂಸಾಚಾರವಾಗಿದೆ ಎಂದು ಅವರು, ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ಕಾರ್ಮಿಕರು, ಮಹಿಳೆಯರು, ಯುವಕರಿಗೆ ಪಾಲು ನೀಡಬೇಕು'' ಎಂದು ಆಗ್ರಹಿಸಿದರು.

''ಇಂದು ಸರಕಾರ ನಮ್ಮನ್ನು ಮನುಷ್ಯರಂತೆ ಕಾಣುತ್ತಿಲ್ಲ. ಆದುದರಿಂದ ಸರಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇಲ್ಲ ಎಂದು ನಾವೆಲ್ಲಾ ತಿಳಿದುಕೊಳ್ಳಬೇಕು. ಧರ್ಮ, ಜಾತಿಯ ಆಧಾರದ ಮೇಲೆ ನಮ್ಮನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ವಿಭಜನೆಯಾಗಬಾರದು'' ಎಂದು ಮೇಧಾ ಪಾಟ್ಕರ್ ಕಿವಿಮಾತು ಹೇಳಿದರು.

ನಟ ಚೇತನ್ ಅಹಿಂಸಾ ಮಾತನಾಡಿ, ''ಅಂಬೇಡ್ಕರ್ ಕಾರ್ಮಿಕ ಮಂತ್ರಿಯಾಗಿ ಅನೇಕ ಕಾನೂನುಗಳನ್ನು ತಂದರು, ಅವು  ಇಂದಿಗೂ ಸಹ ಪ್ರಸ್ತುತ ಮತ್ತು ಕಾರ್ಮಿಕರನ್ನು ರಕ್ಷಿಸುತ್ತಿವೆ. ಆದರೆ ಅವುಗಳನ್ನು ನಿರ್ಮೂಲನೆ ಮಾಡಲು ಸರ್ಕಾರಯತ್ನಿಸುತ್ತಿದೆ'' ಎಂದು ಹೇಳಿದರು.

ಪಾದಯಾತ್ರೆಯ ಮೊದಲನೆಯ ದಿನದಂದು  2000 ಗಣಿ ಕಾರ್ಮಿಕರು, ರೈತರು, ಹೋರಾಟಗಾರರು ಭಾಗವಹಿಸಿದ್ದರು. 

► ಹಕ್ಕೊತ್ತಾಯಗಳು

► 2011 ರಲ್ಲಿಉದ್ಯೋಗ ಕಳೆದುಕೊಂಡ ಗಣಿಕಾರ್ಮಿಕರ ಕುಟುಂಬಕ್ಕೆರೂ. 5 ಲಕ್ಷ ಪರಿಹಾರ.

►ಗಣಿ ಕಾರ್ಮಿಕರ ಕುಟುಂಬಕ್ಕೆ ನೀರಾವರಿ ಸೌಲಭ್ಯದೊಂದಿಗೆ 5 ಎಕರೆ ಭೂಮಿ.

► ಕೆಲಸ ಪುನರಾರಂಭಗೊಂಡಿರುವ "ಎ" ಮತ್ತು "ಬಿ" ವರ್ಗದ ಗಣಿಗಳಲ್ಲಿ ಕೆಲಸ ಕಳೆದುಕೊಂಡ ಕಾರ್ಮಿರಿಗೆ ಮರು ಉದ್ಯೋಗ.

►ನಿವೃತ್ತಿ ವಯಸ್ಸನ್ನು ತಲುಪಿರುವ ಗಣಿ ಕಾರ್ಮಿಕರಿಗೆ ಮಾಸಿಕ ರೂ. 5,000/- ಪಿಂಚಣಿ.

►ಗಣಿಕಾರ್ಮಿಕರಿಗೆ ನಿವೇಶನ ಮತ್ತು ವಸತಿ, ಸಮುದಾಯಕ ಸೌಲಭ್ಯಗಳಾದ ಅಂಗನವಾಡಿ, ಸಮುದಾಯ ಭವನಗಳು, ಗ್ರಂಥಾಲಯ, ಕಾರ್ಮಿಕರಕೇಂದ್ರ ಮತ್ತು ಪ್ರಾಥಮಿಕಆರೋಗ್ಯ ಕೇಂದ್ರಗಳ ಸ್ಥಾಪನೆ, ಗಣಿಕಾರ್ಮಿರಿಗೆಉಚಿತ ವೈದ್ಯಕೀಯ ಸೇವೆ.

► ಗಣಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತುಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News