ರಾಹುಲ್ ಗಾಂಧಿ ಭಾಷಣ 2 ನಿಮಿಷ ನಿದ್ದೆ ಮಾಡದೇ ಕೇಳಲು ಸಾಧ್ಯವೇ?: ಸಿದ್ದರಾಮಯ್ಯಗೆ ಸಚಿವ ಶ್ರೀರಾಮುಲು ಪ್ರಶ್ನೆ

Update: 2022-10-14 14:56 GMT

ಬೆಂಗಳೂರು, ಅ.14: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನನ್ನದೊಂದು ಸರಳ ಪ್ರಶ್ನೆ. ನಿಮ್ಮ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅವರ ಭಾಷಣವನ್ನು ಎರಡು ನಿಮಿಷ ನೀವು ನಿದ್ದೆ ಮಾಡದೆ  ಕೇಳಲು ಸಾಧ್ಯವೇ.? ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಬಹುತೇಕ ಇಡೀ ಕಾಂಗ್ರೆಸ್ ನಾಯಕರು ದಿನಪೂರ್ತಿ ಮೋದಿ ಹೆಸರು ಹೇಳಿಕೊಂಡೆ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಇದಕ್ಕೆ ನೀವು ಹೊರತಾಗಿಲ್ಲ. ಕೇವಲ 1 ನಿಮಿಷ ಮೋದಿ ಮತ್ತು ಬಿಜೆಪಿ ಹೆಸರು ಹೇಳದೆ ಭಾಷಣ ಮಾಡಲು ಸಿದ್ದರಿದ್ದೀರಾ? ಎಂದು ಸವಾಲು ಹಾಕಿದ್ದಾರೆ.

ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ವಳ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಜನರ ಮುಂದೆ ಸಂತೆ ಭಾಷಣ ಮಾಡಿದಿರಿ. ಈಗ ನಮ್ಮ ಸರಕಾರ ಮಾಡಿ ತೋರಿಸಿದೆ. ಇದನ್ನು ಅರಗಿಸಿಕೊಳ್ಳಲು ಆಗದೆ ನನ್ನ ಜಪ ಮಾಡುತ್ತಿದ್ದೀರಿ. ನನ್ನ ನಾಮ ಸ್ಮರಣೆ ಮಾಡುವುದರಿಂದ ನಿಮ್ಮ ರಾಜಕೀಯ ಅಸ್ತಿತ್ವ ಉಳಿಯುತ್ತದೆ ಎಂದರೆ ಅಭ್ಯಂತರವಿಲ್ಲ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ನನ್ನನ್ನು ಪ್ರಶ್ನೆ ಮಾಡುವ ಮೊದಲು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ದೇವರಾಜ್ ಅರಸ್ ನಂತರ, ನಾನೇ ಯಶಸ್ವಿ ಸಿ.ಎಂ ಎಂದು ನಿಮ್ಮ ಹಿಂಬಾಲಕರಿಂದ ಜೈಕಾರ ಹಾಕಿಸಿಕೊಳ್ಳುವ ನಿಮಗೆ  ಮೀಸಲಾತಿ ಹೆಚ್ಚಿಸಬೇಕು ಎಂಬ ಆಲೋಚನೆ ಇರಲಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

2018 ರ ವಿಧಾನಸಭೆ ಚುನಾವಣೆಯಲ್ಲಿ ನಾನು, ನಮ್ಮ ಪಕ್ಷದ ನಾಯಕರು ಇನ್ನೊಂದು ಬಾರಿ ಬಾದಾಮಿಯಲ್ಲಿ ಪ್ರಚಾರ ನಡೆಸಿದ್ದರೆ 5 ವರ್ಷ ನಿಮ್ಮನ್ನು ಕೇಳುವವರೇ ಇಲ್ಲದಂತೆ ಆಗುತ್ತಿತ್ತು. ತಿಣಕಾಡಿ ಒಂದು ಸಾವಿರ ಚಿಲ್ಲರೆ ಮತಗಳಿಂದ ಗೆದ್ದಿದ್ದರೂ ದುರಂಹಕಾರ ಮಾತ್ರ ನಿಂತಿಲ್ಲ. ಮುಂದಿದೆ ಮಾರಿಹಬ್ಬ ಎಂದು ಶ್ರೀರಾಮುಲು ಹೇಳಿದ್ದಾರೆ.

ಇದನ್ನೂ ಓದಿ: ನನ್ನ ಹೆಸರೆತ್ತದೆ 5 ನಿಮಿಷ ಭಾಷಣ ಮಾಡಿ: ಬಿಎಸ್ ವೈ, ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು

ನಾನು ನಿಮಗಿಂತಲೂ ಕೆಳಮಟ್ಟದ ಭಾಷೆಯಲ್ಲಿ ಟೀಕಿಸಬಲ್ಲೆ. ಆದರೆ ಅದು ನನ್ನ ಸಂಸ್ಕøತಿಯಲ್ಲ. ಒಬ್ಬರನ್ನು ಟೀಕೆ ಮಾಡುವಾಗಲೂ ಸೌಜನ್ಯದ ಎಲ್ಲೆಯನ್ನು ಮೀರಬಾರದು ಎಂದು ಹೇಳಿಕೊಟ್ಟಿದ್ದು ಬಿಜೆಪಿ ಮತ್ತು ಸಂಘ ಪರಿವಾರ. ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿದ್ದೇನೆ. ಬಿಜೆಪಿಗೆ ಪಾದಯಾತ್ರೆ ಅಥವಾ ಹೋರಾಟ ನಡೆಸುವುದು ಹೊಸತೇನಲ್ಲ. ಅದು ನಮ್ಮ ರಕ್ತದ ಕಣಕಣದಲ್ಲೂ ಇದೆ. ಬೀದರ್ ನಿಂದ ಚಾಮರಾಜ ನಗರ, ಮಂಗಳೂರಿನಿಂದ ಕೋಲಾರದವರೆಗೆ ಬೀದಿಯಲ್ಲಿ ನಿಂತೇ ಪಕ್ಷವನ್ನು ಸಂಘಟಿಸಿದ್ದೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.

10 ಸಾವಿರ ಬೆಲೆ ಬಾಳುವ ಶೂ, 1 ಕೋಟಿ ಮೌಲ್ಯದ ಹೂಬ್ಲೋಟ್ ವಾಚ್, ಲಕ್ಷ  ಬೆಲೆಯ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಪಾದಯಾತ್ರೆ ನಡೆಸುವವರು ನಾವಲ್ಲ. ರಾಹುಲ್ ಗಾಂಧಿ ಜೊತೆಗೆ ಮೂರು ಹೆಜ್ಜೆ ಹಾಕಲು ಆಗದೆ, ಕಣ್ ಕಣ್ ಬಿಡುತ್ತಿದ್ದಾಗ ಬಲವಂತವಾಗಿ ಕೈ ಹಿಡಿದುಕೊಂಡು ಓಡೋಡಿ ಹೋಗಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದು ಯಾರು? ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲುಆಗದಿದ್ದರೂ, ಅಸ್ತಿತ್ವಉಳಿಸಿಕೊಳ್ಳಲು ಹೆಣಗಾಟ ನಡೆಸುತ್ತಿರುವವರು ನಾವೋ ನೀವಾ.? ಎಂದು ಅವರು ಟೀಕಿಸಿದ್ದಾರೆ.

ನಿಮ್ಮ ನಾಮಸ್ಮರಣೆ ಮಾಡಿಕೊಂಡು ರಾಜಕೀಯ ಮಾಡಬೇಕಾದ ದರ್ದು ನಮಗಿಲ್ಲ. ಅದರ ಅಗತ್ಯವೂ ಇಲ್ಲ. ನಾವು ನಿಮ್ಮ ಹೆಸರು ಹೇಳದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಮೇಲೆ ಜನರ ಬಳಿ ಹೋಗಿ ಭಾಷಣ ಮಾಡುತ್ತೇವೆ. ಆದರೆ ನೀವು ಯಾವ ಮುಖ ಇಟ್ಟುಕೊಂಡು ಹೋಗುತ್ತೀರಿ? ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News