ಭಾರತೀಯ ಮಾಧ್ಯಮಗಳ ಶೇ. 90 ರಷ್ಟು ನಾಯಕತ್ವ ಸ್ಥಾನಗಳಲ್ಲಿ ಮೇಲ್ಜಾತಿಯವರು: ಅಧ್ಯಯನ ವರದಿ

Update: 2022-10-15 15:13 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಅ.15: ಭಾರತದಲ್ಲಿಯ ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುಮಾರು ಶೇ.90ರಷ್ಟು ನಾಯಕತ್ವ ಹುದ್ದೆಗಳನ್ನು‌ ಸಾಮಾನ್ಯ ವರ್ಗ ಅಥವಾ ಮೇಲ್ಜಾತಿಗಳಿಗೆ ಸೇರಿದ ಉದ್ಯೋಗಿಗಳು ಆಕ್ರಮಿಸಿಕೊಂಡಿದ್ದಾರೆ ಎಂದು ಶುಕ್ರವಾರ ಬಿಡುಗಡೆಗೊಂಡ ಆಕ್ಸ್ಫಾಮ್ ಇಂಡಿಯಾ-ನ್ಯೂಸ್ಲಾಂಡ್ರಿ ವರದಿಯು ಬೆಟ್ಟು ಮಾಡಿದೆ.

‘ನಮ್ಮ ಕಥೆಗಳನ್ನು ಯಾರು ಹೇಳುತ್ತಾರೆ ಎನ್ನುವುದು ಮುಖ್ಯ: ಭಾರತೀಯ ಮಾಧ್ಯಮಗಳಲ್ಲಿ ಶೋಷಿತ ಜಾತಿ ಗುಂಪುಗಳ ಪ್ರಾತಿನಿಧ್ಯ ’ವರದಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು(ಎಸ್ಸಿ/ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಸೇರಿದ ವ್ಯಕ್ತಿಗಳು ಮಾಧ್ಯಮ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎನ್ನುವುದನ್ನೂ ಎತ್ತಿ ತೋರಿಸಿದೆ.

2021 ಎಪ್ರಿಲ್ ಮತ್ತು 2022 ಮಾರ್ಚ್ ನಡುವಿನ 20,000ಕ್ಕೂ ಅಧಿಕ ನಿಯತಕಾಲಿಕಗಳು ಮತ್ತು ವೃತ್ತಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು,76 ನಿರೂಪಕರು ಮತ್ತು 3,318 ಪ್ಯಾನೆಲಿಸ್ಟ್ಗಳೊಂದಿಗೆ 2,075 ಪ್ರೈಮ್ ಟೈಮ್ ಚರ್ಚೆಗಳು ಹಾಗೂ ಆನ್ಲೈನ್ ಸುದ್ದಿ ವರದಿಗಳನ್ನು ವಿಶ್ಲೇಷಿಸಿದ ಬಳಿಕ ಸಂಶೋಧಕರು ಈ ಅಂಕಿಅಂಶಗಳನ್ನು ಮಂಡಿಸಿದ್ದಾರೆ.

ನಾಯಕತ್ವ ಪಾತ್ರಗಳಲ್ಲಿ ವಿವಿಧ ಸಮುದಾಯಗಳ ಪ್ರಾತಿನಿಧ್ಯವನ್ನು ಲೆಕ್ಕ ಹಾಕಲು ಅಧ್ಯಯನವು ಹಿಂದು ಮತ್ತು ಇಂಗ್ಲಿಷ್ ವೃತ್ತಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳ 190 ಸ್ಯಾಂಪಲ್ಗಳನ್ನು ಅವಲೋಕಿಸಿದ್ದು,ಶೇ.91ರಷ್ಟು ಹುದ್ದೆಗಳಲ್ಲಿ ಸಾಮಾನ್ಯ ವರ್ಗ,ಶೇ.2.65ರಷ್ಟು ಹುದ್ದೆಗಳಲ್ಲಿ ಒಬಿಸಿ ಮತ್ತು ಶೇ.1.59ರಷ್ಟು ಹುದ್ದೆಗಳಲ್ಲಿ ಎಸ್ಸಿಗೆ ಸೇರಿದವರಿದ್ದಾರೆ ಎನ್ನುವುದನ್ನು ಕಂಡುಕೊಂಡಿದೆ. ಎಸ್ಟಿ ಸಮುದಾಯಕ್ಕೆ ಸೇರಿದ ಒಬ್ಬರೂ ಸುದ್ದಿವಾಹಿನಿಗಳು, ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಯಾವುದೇ ನಾಯಕತ್ವ ಹುದ್ದೆಯನ್ನು ಹೊಂದಿಲ್ಲ.

ಎಂಟು ಇಂಗ್ಲಿಷ್ ವೃತ್ತಪತ್ರಿಕೆಗಳ 35 ನಾಯಕತ್ವ ಹುದ್ದೆಗಳ ಕುರಿತ ದತ್ತಾಂಶಗಳು ಸುಮಾರು ಶೇ.100ರಷ್ಟು ಹುದ್ದೆಗಳಲ್ಲಿ ಪ್ರಬಲ ಜಾತಿಗಳಿಗೆ ಸೇರಿದವರೇ ಇದ್ದಾರೆ ಎನ್ನುವುದನ್ನು ತೋರಿಸಿದೆ. ಇದಕ್ಕೆ ಹೋಲಿಸಿದರೆ ಹಿಂದಿ ವೃತ್ತಪತ್ರಿಕೆಗಳಲ್ಲಿಯ ನಾಯಕತ್ವ ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಮತ್ತು ಒಬಿಸಿಗಳು ಉತ್ತಮ ಪ್ರಾತಿನಿಧ್ಯವನ್ನು ಹೊಂದಿವೆ ಎಂದು ವರದಿಯು ಹೇಳಿದೆ. ಪರಿಶೀಲಿಸಲಾದ 31 ಹುದ್ದೆಗಳ ಪೈಕಿ ಶೇ.80ಕ್ಕೂ ಅಧಿಕ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಸೇರಿದವರ ಪಾಲಾಗಿದ್ದರೆ,ಶೇ.6.45ರಷ್ಟು ಹುದ್ದೆಗಳಲ್ಲಿ ಒಬಿಸಿಗಳು ಮತ್ತು ಶೇ.3.23ರಷ್ಟು ಹುದ್ದೆಗಳಲ್ಲಿ ಎಸ್ಸಿಗಳಿದ್ದಾರೆ.

ವರದಿಗಾಗಿ ವಿಶ್ಲೇಷಣೆಗೊಳಗಾದ ಎಂಟು ಸುದ್ದಿವಾಹಿನಿಗಳ ಅರ್ಧಕ್ಕೂ ಹೆಚ್ಚಿನ ನಿರೂಪಕರು ಮೇಲ್ಜಾತಿಗಳಿಗೆ ಸೇರಿದವರಾಗಿದ್ದು,ಯಾವುದೇ ವಾಹಿನಿ ದಲಿತ ಅಥವಾ ಆದಿವಾಸಿ ಸಮುದಾಯದ ಚರ್ಚಾ ನಿರೂಪಕನನ್ನು ಹೊಂದಿಲ್ಲ.

ಎಸ್ಸಿ ವರ್ಗದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದ್ದು,2019ರಲ್ಲಿ ಶೂನ್ಯವಿದ್ದ ಅವರ ಪ್ರಾತಿನಿಧ್ಯ 2022ರಲ್ಲಿ ಶೇ.3.17ರಷ್ಟು ಏರಿಕೆಯಾಗಿದೆ ಎಂದು ವರದಿಯು ಹೇಳಿದೆ.

ಡಿಜಿಟಲ್ ಮಾಧ್ಯಮಗಳಲ್ಲಿ ಎಸ್ಸಿ ಮತ್ತು ಎಸ್ಟಿಗಳ ಪ್ರಾತಿನಿಧ್ಯ ಶೂನ್ಯದಿಂದ ಅನುಕ್ರಮವಾಗಿ ಶೇ.11 ಮತ್ತು ಸುಮಾರು ಶೇ.3ರಷ್ಟು ಏರಿಕೆಯಾಗಿದ್ದರೆ,ಒಬಿಸಿಗಳ ಪ್ರಾತಿನಿಧ್ಯವು ಅಲ್ಪ ಏರಿಕೆಯನ್ನು ಕಂಡಿದೆ. ಈಗಲೂ ಡಿಜಿಟಲ್ ಮಾಧ್ಯಮಗಳಲ್ಲಿ ಸಾಮಾನ್ಯ ವರ್ಗದ ಪ್ರಾತಿನಿಧ್ಯ ಸುಮಾರು ಶೇ.77ರಷ್ಟಿದೆ ಎಂದು ವರದಿಯು ಕಂಡುಕೊಂಡಿದೆ.

ಸುದ್ದಿ ಜಾಲತಾಣಗಳಲ್ಲಿಯ ಲೇಖಕರ ಹೆಸರಿನೊಂದಿಗಿನ ಲೇಖನಗಳ ಪೈಕಿ ಸುಮಾರು ಶೇ.72ರಷ್ಟನ್ನು ಮೇಲ್ಜಾತಿಗಳಿಗೆ ಸೇರಿದವರು ಬರೆದಿದ್ದರೆ, ಅಧ್ಯಯನಕ್ಕೊಳಪಡಿಸಲಾಗಿದ್ದ 12 ನಿಯತಕಾಲಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದ 972 ಲೇಖನಗಳ ಪೈಕಿ ಕೇವಲ 10 ಜಾತಿ ಸಂಬಂಧಿತ ವಿಷಯಗಳ ಕುರಿತಾಗಿದ್ದವು ಎಂದು ವರದಿಯು ತಿಳಿಸಿದೆ.

ದೇಶದ ಸುದ್ದಿಮನೆಗಳು ಶೋಷಿತ ಅಥವಾ ಅಂಚಿನಲ್ಲಿರುವ ಸಮುದಾಯಗಳಿಗೆ ಪ್ರಾತಿನಿಧ್ಯವಿಲ್ಲದ ಸ್ಥಳಗಳಾಗಿಯೇ ಉಳಿದುಕೊಂಡಿವೆ ಎಂದು ಹೇಳಿದ ಆಕ್ಸ್ಫಾಮ್ ಇಂಡಿಯಾದ ಸಿಇಒ ಅಮಿತಾಭ್ ಬೆಹರ್ ಅವರು,ಎಲ್ಲ ವೇದಿಕೆಗಳಲ್ಲಿಯ ಮಾಧ್ಯಮ ಸಂಸ್ಥೆಗಳ ನಾಯಕರು ದಲಿತರು,ಆದಿವಾಸಿಗಳು ಮತ್ತು ಬಹುಜನರಿಗೆ ಉದ್ಯೋಗ ಪೂರಕ ವಾತಾವರಣವನ್ನು ಸೃಷ್ಟಿಸುವಲ್ಲಿ ವಿಫಲರಾಗುತ್ತಿದ್ದಾರೆ. ದೇಶದ ಮಾಧ್ಯಮಗಳು ವರದಿಗಾರಿಕೆಯಲ್ಲಿ ಮಾತ್ರವಲ್ಲ,ನೇಮಕಾತಿಗಳಲ್ಲಿಯೂ ಸಮಾನತೆಯ ಸಾಂವಿಧಾನಿಕ ನೀತಿಯನ್ನು ಎತ್ತಿಹಿಡಿಯುವ ಅಗತ್ಯವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News