ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಇಂದು ಮತ ಎಣಿಕೆ

Update: 2022-10-19 01:52 GMT
ಮಲ್ಲಿಕಾರ್ಜುನ ಖರ್ಗೆ - ಶಶಿ ತರೂರ್

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷಕ್ಕೆ 24 ವರ್ಷ ಬಳಿಕ ಗಾಂಧಿ ಕುಟುಂಬದವರಲ್ಲದವರು ಅಧ್ಯಕ್ಷರಾಗಿ ಆಯ್ಕೆಯಾಗು ತ್ತಿದ್ದು, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಅವರ ಮಧ್ಯೆ ನಡೆದ ಹಣಾಹಣಿಯಲ್ಲಿ ಗೆದ್ದವರು ಪಕ್ಷದ ಅತ್ಯುನ್ನತ ಹುದ್ದೆ ಅಲಂಕರಿಸಲಿದ್ದಾರೆ.

ಮತಗಳ ಎಣಿಕೆ ಬೆಳಗ್ಗೆ 10ಕ್ಕೆ ಆರಂಭವಾಗಲಿದೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಸಂಜೆ 3 ಗಂಟೆಯ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ದೇಶಾದ್ಯಂತ 68 ಮತಗಟ್ಟೆಗಳಲ್ಲಿ ಸೊಮವಾರ ಅಧ್ಯಕ್ಷ ಹುದ್ದೆಗೆ ಮತದಾನ ನಡೆದಿತ್ತು. 9915 ಮಂದಿ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳು ಮತ ಚಲಾಯಿಸುವ ಅರ್ಹತೆ ಪಡೆದಿದ್ದರು. ಈ ಪೈಕಿ 9500ಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದರು.

ಇಬ್ಬರು ಸ್ಪರ್ಧಿಗಳ ತಲಾ ಐದು ಮಂದಿ ಏಜೆಂಟರ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಇಬ್ಬರು ಮೀಸಲು ಏಜೆಂಟರನ್ನು ನೇಮಕ ಮಾಡಲಾಗಿದೆ. ಯಾವುದೇ ಅನಿರೀಕ್ಷಿತ ಬದಲಾವಣೆಗಳು ಇಲ್ಲದಿದ್ದಲ್ಲಿ, ದೇಶದ ಅತ್ಯಂತ ಹಳೆಯ ಪಕ್ಷದ ಸಾರಥ್ಯದ ಹೊಣೆ ಖರ್ಗೆಯವರ ಹೆಗಲೇರಲಿದೆ.

137 ವರ್ಷಗಳ ಪಕ್ಷದ ಸುಧೀರ್ಘ ಇತಿಹಾಸದಲ್ಲಿ ಪಕ್ಷದ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಡೆದಿರುವುದು ಇದು ಆರನೇ ಬಾರಿ. 1998ರಲ್ಲಿ ಸೋನಿಯಾಗಾಂಧಿ ಜಿತೇಂದ್ರ ಪ್ರಸಾದ್ ಅವರನ್ನು ಪರಾಭವಗೊಳಿಸಿದ್ದರು. ಇವರು 2017ರ ಡಿಸೆಂಬರ್ ವರೆಗೂ ಆ ಹುದ್ದೆಯಲ್ಲಿ ಮುಂದುವರಿದಿದ್ದರು. ಬಳಿಕ ಅತ್ಯುನ್ನತ ಹುದ್ದೆಯ ಜವಾಬ್ದಾರಿಯನ್ನು ರಾಹುಲ್‍ಗಾಂಧಿಯವರಿಗೆ ವಹಿಸಿದ್ದರು. ಆದಾಗ್ಯೂ 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿದ ಬಳಿಕ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News