ಭಾರತದಿಂದ ಹೊರದೇಶಕ್ಕೆ ವಿಮಾನಯಾನ ಕೈಗೊಳ್ಳಲು 'ಪುಲಿಟ್ಝರ್‌' ವಿಜೇತೆ ಸನ್ನಾ ಇರ್ಷಾದ್‌ ಮಟ್ಟೂಗೆ ಮತ್ತೆ ತಡೆ

Update: 2022-10-19 02:36 GMT
Photo: Sanna Irshad Mattoo/Facebook

ಹೊಸದಿಲ್ಲಿ: ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಬುಧವಾರ ಕಾಶ್ಮೀರದ ಪತ್ರಿಕಾ ಛಾಯಾಗ್ರಾಹಕಿ ಸನ್ನಾ ಇರ್ಷಾದ್‌ ಮಟ್ಟೂ (Sanna Irshad Mattoo) ಅವರನ್ನು ವಿದೇಶಕ್ಕೆ ವಿಮಾನಯಾನ ಕೈಗೊಳ್ಳದಂತೆ ತಡೆಯಲಾಯಿತು.

ಕಳೆದ ಜುಲೈನಲ್ಲೂ ಇವರನ್ನು ತಡೆಯಲಾಗಿದ್ದು, ಯುವ ಛಾಯಾಗ್ರಾಹಕಿಯ ವಿದೇಶಿ ಯಾನವನ್ನು ತಡೆದಿರುವುದು ಇದು ಎರಡನೇ ಬಾರಿ.

"ನ್ಯೂಯಾರ್ಕ್‍ನಲ್ಲಿ 'ಪುಲಿಟ್ಝರ್‌' (Pulitzer) ಪ್ರಶಸ್ತಿ ಸ್ವೀಕರಿಸಲು ನಾನು ಹೊರಟಿದ್ದೆ. ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ನನ್ನನ್ನು ತಡೆದಿದ್ದಾರೆ. ಅಮೆರಿಕದ ವೀಸಾ ಮತ್ತು ಟಿಕೆಟ್ ಹೊಂದಿದ್ದರೂ, ಅಂತರರಾಷ್ಟ್ರೀಯ ಯಾನ ಕೈಗೊಳ್ಳದಂತೆ ನಿರ್ಬಂಧಿಸಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

"ವಿನಾಕಾರಣ ನನ್ನನ್ನು ಇಮಿಗ್ರೇಶನ್ ಅಧಿಕಾರಿಗಳು ತಡೆದಿರುವುದು ಇದು ಎರಡನೇ ಬಾರಿ. ಕಳೆದ ಕೆಲ ತಿಂಗಳ ಹಿಂದೆ ಇಂಥ ಘಟನೆ ನಡೆದ ಬಳಿಕ ಹಲವು ಅಧಿಕಾರಿಗಳನ್ನು ಸಂಪರ್ಕಿಸಿದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನನಗೆ ಜೀವಮಾನದಲ್ಲಿ ಒದಗಿ ಬಂದ ಒಂದು ಬಾರಿಯ ಅವಕಾಶವಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಬೇಸರಿಸಿದ್ದಾರೆ.

ಪ್ರಶಸ್ತಿ ವಿಜೇತರ ಪೈಕಿ ಒಬ್ಬರಾದ ಹಿನ್ನೆಲೆಯಲ್ಲಿ ಕಳೆದ ಜುಲೈನಲ್ಲಿ ಪುಸ್ತಕ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ದೆಹಲಿಯಿಂದ ಪ್ಯಾರೀಸ್‍ಗೆ ತೆರಳುವ ವೇಳೆ ಇವರ ಪ್ರಯಾಣಕ್ಕೆ ತಡೆ ಒಡ್ಡಲಾಗಿತ್ತು. ಆದರೆ ತಡೆದಿರುವುದಕ್ಕೆ ಇಮಿಗ್ರೇಶನ್ ಅಧಿಕಾರಿಗಳು ಯಾವ ಕಾರಣವನ್ನೂ ನೀಡುತ್ತಿಲ್ಲ ಎಂದು ಅವರು ಆಪಾದಿಸಿದ್ದಾರೆ. ನಿಮ್ಮ ಪ್ರಯಾಣಕ್ಕೆ ನಿರ್ಬಂಧವಿದೆ ಎಂದಷ್ಟೇ ಹೇಳುತ್ತಿರುವುದಾಗಿ ವಿವರಿಸಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News