ಮುತಾಲಿಕ್ ಹೇಳಿಕೆಗೆ ಶಾಸಕ ಝಮೀರ್ ಅಹ್ಮದ್ ತಿರುಗೇಟು

Update: 2022-10-21 18:01 GMT

ಹುಬ್ಬಳ್ಳಿ, ಅ.21: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಿಂದೂಗಳು ಪೂಜಾ ಸಾಮಗ್ರಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಹಿಂದೂಗಳಿಂದಲೆ ಖರೀದಿಸಬೇಕು. ಯಾವುದೇ ಕಾರಣಕ್ಕೂ ಮುಸ್ಲಿಮ್ ವ್ಯಾಪಾರಿಗಳಿಂದ ಏನನ್ನೂ ಖರೀದಿಸಬಾರದು ಎಂದು ಹೇಳಿಕೆ ನೀಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‍ಗೆ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುತಾಲಿಕ್ ಹೇಳಿದ ತಕ್ಷಣ ಹಿಂದೂಗಳು ಮುಸ್ಲಿಮರ ಬಳಿ ವಸ್ತುಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಇವರು ಹಿಂದೂಗಳ ಪರನೂ ಇಲ್ಲ, ಮುಸ್ಲಿಮರ ಪರನೂ ಇಲ್ಲ. ಕೇವಲ ತಮ್ಮ ಬೇಳೆ ಬೇಯಿಸಿಕೊಳ್ಳೋದಕ್ಕೆ ಇಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದರು.

ಮುತಾಲಿಕ್ ನೀಡಿರುವ ಕರೆಗೆ ಹಿಂದೂ ಸಹೋದರರೆ ವಿರೋಧಿಸಿದ್ದಾರೆ. ಹಲಾಲ್ ವಸ್ತುಗಳನ್ನು ನಾವು ತಿನ್ನುತ್ತೇವೆ ಎಂದು ಹಿಂದೂಗಳು ಹೇಳಿದ್ದಾರೆ. ನಮ್ಮ ನಾಡಿನಲ್ಲಿ ಹಿಂದೂ, ಮುಸ್ಲಿಮರು ಅಣ್ಣ ತಮ್ಮಂದಿರ ರೀತಿ ಜೀವನ ನಡೆಸುತ್ತಿದ್ದಾರೆ. ನಮ್ಮ ನಡುವೆ ಹುಳಿ ಹಿಂಡಲು ಯಾರಿಂದಲೂ ಸಾಧ್ಯವಿಲ್ಲ. ಯಾರೋ ನಾಲ್ಕೈದು ಜನ ಹಲಾಲ್ ವಿರುದ್ಧ ಮಾತನಾಡಿದ್ದಾರೆ ಅಷ್ಟೇ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಮುಸ್ಲಿಮರು ವ್ಯಾಪಾರ ಮಾಡುವ ಪ್ರದೇಶಗಳಿಗೆ ಹೋಗೋಣ ನಡೆಯಿರಿ, ಅಲ್ಲಿ ನೋಡೋಣ ಮುಸ್ಲಿಮರ ಬಳಿ ಹಿಂದೂಗಳು ಯಾವುದೆ ವಸ್ತುಗಳನ್ನು ಖರೀದಿಸುತ್ತಿಲ್ಲವೇ? ದೀಪಾವಳಿ ಪ್ರಯುಕ್ತ ಹೆಚ್ಚಾಗಿ ದೀಪಗಳನ್ನು ತಯಾರಿಸುವುದು ಮುಸ್ಲಿಮರು, ಅದನ್ನು ಖರೀದಿಸುವುದು ಹಿಂದೂಗಳು. ಸಮಾಜದಲ್ಲಿ ಪ್ರೀತಿ ಹಂಚುವ ಕೆಲಸ ಮಾಡಿ, ದ್ವೇಷ ಬಿತ್ತುವುದನ್ನು ಕೈ ಬಿಡಿ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ ಜೋಡೊ ಯಾತ್ರೆಗೆ ಜನರಿಂದ ಈ ರೀತಿಯ ಬೆಂಬಲ ಸಿಗುತ್ತದೆ ಎಂದು ಬಿಜೆಪಿಯವರು ನಿರೀಕ್ಷೆ ಮಾಡಿರಲಿಲ್ಲ. ಈ ಯಾತ್ರೆಯ ಯಶಸ್ಸನ್ನು ಸಹಿಸಿಕೊಳ್ಳು ಆಗದೆ, ಈಗ ಬಿಜೆಪಿಯವರು ಯಾವುದೋ ಯಾತ್ರೆ ಪ್ರಾರಂಭ ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐದು ವರ್ಷಗಳ ಆಡಳಿತದಲ್ಲಿ ನೀಡಿದ ಕಾರ್ಯಕ್ರಮಗಳನ್ನು ಜನರು ಇಂದಿಗೂ ಸ್ಮರಿಸುತ್ತಿದ್ದಾರೆ. ರಾಜ್ಯದ ಬಡವರಿಗೆ ಒಳ್ಳೆಯದು ಆಗಬೇಕಾದರೆ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News