ಉದ್ಯೋಗದ ಮೇಲೆ ಕೋವಿಡ್ ಅಡ್ಡ ಪರಿಣಾಮ: ಪ್ರಧಾನಿ ಮೋದಿ

Update: 2022-10-22 18:10 GMT
photo: pti

ಹೊಸದಿಲ್ಲಿ, ಅ. 22: ಕೋವಿಡ್ covid 19 ಸಾಂಕ್ರಾಮಿಕ ರೋಗದ ಬಳಿಕ ಜಗತ್ತಿನಾದ್ಯಂತದ ಹಲವು ರಾಷ್ಟ್ರಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಹೊಡೆತದ ತೀವ್ರತೆಯನ್ನು ಕಡಿಮೆಗೊಳಿಸುವಲ್ಲಿ ಕೇಂದ್ರ ಸರಕಾರ central government ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ Narendra Modi ಅವರು ಶನಿವಾರ ಹೇಳಿದ್ದಾರೆ.

ರೋಜ್‌ಗಾರ್ ಮೇಳದಲ್ಲಿ ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ 75 ಸಾವಿರ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಯುವ ಜನತೆಗೆ ಗರಿಷ್ಠ ಉದ್ಯೋಗಗಳನ್ನು ಸೃಷ್ಟಿಸಲು ಕೂಡ ಕೇಂದ್ರ ಸರಕಾರ ಎಲ್ಲ ದಿಶೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.

‘‘ಜಾಗತಿಕ ಪರಿಸ್ಥಿತಿ ತುಂಬಾ ಚೆನ್ನಾಗಿಲ್ಲ ಎಂಬುದು ಸತ್ಯ. ಹಲವು ದೊಡ್ಡ ಆರ್ಥಿಕತೆಗಳು ಹೆಣಗಾಡುತ್ತಿವೆ. ಹಲವು ದೇಶಗಳು ಅತ್ಯಧಿಕ ಹಣುದುಬ್ಬರದಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ ಹಾಗೂ ಅದರ ನಿರುದ್ಯೋಗ ಪ್ರಮಾಣ ಉತ್ತುಂಗದಲ್ಲಿದೆ’’ ಎಂದು ಪ್ರಧಾನಿ ಅವರು ಹೇಳಿದರು.

ಶತಮಾನಕ್ಕೊಮ್ಮೆ ಬರುವ ಸಾಂಕ್ರಾಮಿಕ ರೋಗಗಳ ಅಡ್ಡ ಪರಿಣಾಮ 100 ದಿನಗಳಲ್ಲಿ ಮಾಯವಾಗುವುದಿಲ್ಲ ಎಂದು ಅವರು ಹೇಳಿದರು.

ಜಗತ್ತಿನಾದ್ಯಂತ ಈ ಬಿಕ್ಕಟ್ಟನ್ನು ಎದುರಿಸಿರುವ ಹೊರತಾಗಿಯೂ ಇದರ ದುಷ್ಪರಿಣಾಮ ಎಲ್ಲೆಡೆ ಕಂಡು ಬರುತ್ತಿದೆ. ಈ ದುಷ್ಪರಿಣಾಮದಿಂದ ನಮ್ಮ ದೇಶವನ್ನು ರಕ್ಷಿಸಲು ಸರಕಾರ ಕೆಲವು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.

‘‘ದೇಶದ ಮೇಲಿನ ಈ ದುಷ್ಪರಿಣಾಮವನ್ನು ಕಡಿಮೆ ಮಾಡಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಇದು ಸವಾಲಿನ ಕೆಲಸ. ಆದರೆ, ನಿಮ್ಮ ಹಾರೈಕೆಯಿಂದ ನಾವು ನಮ್ಮ ದೇಶವನ್ನು ಇದುವರೆಗೆ ರಕ್ಷಿಸುತ್ತಾ ಬಂದಿದ್ದೇವೆ’’ ಎಂದು ಅವರು ಹೇಳಿದರು.

ಇದಕ್ಕಿಂತ ಮೊದಲು ಪ್ರಧಾನಿ ಅವರು 75,000 ಉದ್ಯೋಗ ಆಕಾಂಕ್ಷಿಗಳಿಗೆ ನೇಮಕಾತಿ ಪತ್ರವನ್ನು ಆನ್‌ಲೈನ್ ಮೂಲಕ ವಿತರಿಸಿದರು.

ಈ ನೂತನ ನೇಮಕಾತಿ ಅಡಿಯಲ್ಲಿ ದೇಶಾದ್ಯಂತದಿಂದ ಆಯ್ಕೆ ಮಾಡಲಾದ ಉದ್ಯೋಗ ಆಕಾಂಕ್ಷಿಗಳು ಕೇಂದ್ರ ಸರಕಾರದ 38 ಸಚಿವಾಲಯಗಳು ಅಥವಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.  ಅವರು ಗುಂಪು ಎ ಹಾಗೂ ಬಿ (ಗಝೆಟೆಡ್), ಗುಂಪು ಬಿ (ಗಝಟೇತರ) ಹಾಗೂ ಗುಂಪು ಸಿಯಲ್ಲಿ ವಿವಿಧ ಶ್ರೇಣಿಯ ಸರಕಾರದ ಹುದ್ದೆಗಳಿಗೆ  ಸೇರಲಿದ್ದಾರೆ.

ನೇಮಕಾತಿ ಆಗುವ ಹುದ್ದೆಗಳು ಕೇಂದ್ರ ಶಸಸ್ತ್ರ ಪಡೆಗಳ ಸಿಬ್ಬಂದಿ, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೆಬಲ್, ಎಲ್‌ಡಿಸಿ, ಶೀಘ್ರಲಿಪಿಕಾರರು, ಆಪ್ತ ಸಹಾಯಕರು, ಆದಾಯ ತೆರಿಗೆ ಇಲಾಖೆ ಇನ್ಸ್‌ಪೆಕ್ಟರ್ ಹಾಗೂ ಎಂಟಿಎಸ್‌ಗಳನ್ನು ಒಳಗೊಂಡಿರಲಿದೆ ಎಂದು ಸರಕಾರ ನೀಡಿದ ಹೇಳಿಕೆ ತಿಳಿಸಿದೆ.

ಈ ನೇಮಕಾತಿಯನ್ನು ಸಚಿವಾಲಯಗಳು ಅಥವಾ ಇಲಾಖೆಗಳು ತಾವೇ ಅಥವಾ ಯುಪಿಎಸ್‌ಸಿ, ಎಸ್‌ಎಸ್‌ಸಿ ಹಾಗೂ ರೈಲ್ವೆ ನೇಮಕಾತಿ ಮಂಡಳಿಯಂತಹ  ಸಂಸ್ಥೆಗಳ ಮೂಲಕ ಮಾಡಿಕೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News