ಫೇಸ್ಬುಕ್,ಇನ್ಸ್ಟಾಗ್ರಾಂ ಮತ್ತು ವಾಟ್ಸಾಪ್ ಗಳಿಗೆ ಭಾರತ ಅತ್ಯಂತ ಮಹತ್ವಪೂರ್ಣ ದೇಶ: ಮೆಟಾ

Update: 2022-10-25 16:22 GMT
PHOTO: PTI

ಕೋಲ್ಕತಾ,ಅ.25: ತನ್ನ ಫೇಸ್ಬುಕ್,ಇನ್ಸ್ಟಾಗ್ರಾಂ ಮತ್ತು ವಾಟ್ಸಾಪ್(Facebook, Instagram and WhatsApp) ವೇದಿಕೆಗಳ ಎಲ್ಲ ಹೊಸ ವಿಷಯಗಳಲ್ಲಿ ಭಾರತವು ಮೆಟಾದ ಪಾಲಿಗೆ ಅತ್ಯಂತ ಮಹತ್ವದ ದೇಶವಾಗಿದೆ ಎಂದು ಫೇಸ್ಬುಕ್ ಇಂಡಿಯಾ (ಮೆಟಾ)ದ ನಿರ್ದೇಶಕ ಮತ್ತು ಸಹಭಾಗಿತ್ವ ಮುಖ್ಯಸ್ಥ ಮನೀಷ್ ಚೋಪ್ರಾ(Manish Chopra) ಅವರು ಇಲ್ಲಿ ಹೇಳಿದರು. ನಕಲಿ ಪ್ರೊಫೈಲ್ಗಳು (profiles)ಮತ್ತು ಸುಳ್ಳು ಮಾಹಿತಿಗಳ ಪಿಡುಗನ್ನು ತಡೆಯಲು ಕಂಪನಿಯು ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ಅವರು ತಿಳಿಸಿದರು.

ಹಲವಾರು ಬ್ರಾಂಡ್ಗಳು ಹಾಗೂ ಕಿರು ವೀಡಿಯೊಗಳ ಮೂಲಕ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಮತ್ತು ವೀಕ್ಷಕರನ್ನು ಸೆಳೆದುಕೊಳ್ಳಲು ಕೋಟ್ಯಂತರ ಜನರಿಗೆ ಮೆಟಾ ಉತ್ತಮ ಅವಕಾಶವನ್ನು ಒದಗಿಸಿದೆ ಎಂದು ತಿಳಿಸಿದ ಅವರು,‘ಭಾರತವು ಬಹು ಆಯಾಮಗಳಿಂದ ನಮ್ಮ ವೇದಿಕೆಗಳಿಗೆ ಅತ್ಯಂತ ನಿರ್ಣಾಯಕ ಮಾರುಕಟ್ಟೆಯಾಗಿದೆ. ಬಹಳಷ್ಟು ಹೊಸ ಉತ್ಪನ್ನಗಳ ಕಲಿಕೆ ಮತ್ತು ವರ್ಧನೆಯನ್ನು ಇಲ್ಲಿ ಮಾಡಲಾಗುತ್ತಿದೆ.

ಇದಕ್ಕೆ ‘ರೀಲ್ಸ್’ಒಂದು ಉದಾಹರಣೆಯಾಗಿದೆ. ಇದು ನಾವು ಹೊಸ ಉತ್ಪನ್ನಗಳ ವೈಶಿಷ್ಟಗಳನ್ನು ಅತ್ಯಂತ ಹೆಚ್ಚಿನ ಪರೀಕ್ಷೆಗೊಳಪಡಿಸಿರುವ ಮಾರುಕಟ್ಟೆಯಾಗಿದೆ ’ಎಂದರು. ಕೋಲ್ಕತಾದಲ್ಲಿ ಮೊದಲ ಬಾರಿಗೆ ನಡೆದ ಮೆಟಾದ ವಾರ್ಷಿಕ ‘ಕ್ರಿಯೇಟರ್ ಡೇ ’ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಚೋಪ್ರಾ,ಈ ಕಾರ್ಯಕ್ರಮವು ವಿಷಯಗಳ ಸೃಷ್ಟಿಕರ್ತರಿಗೆ ಪರಸ್ಪರ ಸಹಯೋಗ ಮತ್ತು ಕಲಿಕೆಗೆ ಅವಕಾಶ ನೀಡುತ್ತದೆ ಎಂದು ಹೇಳಿದರು.

ಎರಡು ವರ್ಷಗಳ ಹಿಂದೆ ಆರಂಭಿಸಲಾದ ‘ರೀಲ್ಸ್’('Reels)ಎರಡು ಮತ್ತು ಮೂರನೇ ದರ್ಜೆ ನಗರಗಳು ಸೇರಿದಂತೆ ಭಾರತದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ನೂತನ ಸಂಶೋಧನಾ ವರದಿಯಂತೆ ಸುಮಾರು 20 ಕೋ.ಜನರು ಕಿರು ವೀಡಿಯೊಗಳನ್ನು ನಿರ್ಮಿಸಲು ಪ್ರತಿ ದಿನ ಸುಮಾರು 45 ನಿಮಿಷಗಳನ್ನು ವ್ಯಯಿಸುತ್ತಿದ್ದಾರೆ ಮತ್ತು ಈ ಸಂಖ್ಯೆ 60 ಕೋ.ಗೆ ಏರುವ ನಿರೀಕ್ಷೆಯಿದೆ ಎಂದರು.

ಡಿಜಿಟಲ್ ಜಾಹೀರಾತು ಸಣ್ಣ ಮತ್ತು ದೊಡ್ಡ ಬ್ರಾಂಡ್ಗಳಿಗೆ ಉತ್ತಮ ಕಾರ್ಯಕ್ಷಮತೆಯ ಸಾಧನವಾಗಿದೆ. ಭಾರತದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಶೇ.50ಕ್ಕೂ ಹೆಚ್ಚಿನ ಬಿಸಿನೆಸ್ ಫಾಲೋವರ್ಗಳು ಎರಡು ಮತ್ತು ಮೂರನೇ ದರ್ಜೆ ನಗರಗಳಿಗೆ ಸೇರಿದವರಾಗಿದ್ದಾರೆ,ಹೀಗಾಗಿ ಕಂಪನಿಯೊಂದು ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಮೂಲಕ ಈ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಚೋಪ್ರಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News