‌ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥರ ದೂರಿನನ್ವಯ ದಿ ವೈರ್‌ ಹಾಗೂ ಸಂಪಾದಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ದಿಲ್ಲಿ ಪೊಲೀಸ್

Update: 2022-10-29 17:49 GMT

ಹೊಸದಿಲ್ಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾದಲ್ಲಿ ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು 700 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಸುದ್ದಿ ಪೋರ್ಟಲ್ ದಿ ವೈರ್, ಅದರ ಸಂಸ್ಥಾಪಕ ಮತ್ತು ಸಂಪಾದಕರ ವಿರುದ್ಧ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಶುಕ್ರವಾರ ಮಾಳವಿಯಾ ಅವರು ವಂಚನೆ, ನಕಲಿ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ದಿ ವೈರ್ ವಿರುದ್ಧ ವಿಶೇಷ ಪೊಲೀಸ್ ಆಯುಕ್ತರಿಗೆ (ಅಪರಾಧ) ದೂರು ಸಲ್ಲಿಸಿದ್ದರು. ವೈರ್ ಸಂಸ್ಥಾಪಕ ಸಿದ್ಧಾರ್ಥ್ ವರದ ರಾಜನ್ ಮತ್ತು ಸಂಪಾದಕರಾದ ಸಿದ್ಧಾರ್ಥ್ ಭಾಟಿಯಾ, ಎಂ ಕೆ ವೇಣು ಮತ್ತು ಜಾಹ್ನವಿ ಸೇನ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪತ್ರಕರ್ತರ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 468 (ಮೋಸ ಮಾಡುವ ಉದ್ದೇಶದಿಂದ ನಕಲಿ), 469 (ಪ್ರತಿಷ್ಠೆಗೆ ಹಾನಿ ಮಾಡಲು ನಕಲಿ ದಾಖಲೆ), 471 (ನಕಲಿ ದಾಖಲೆ ಬಳಕೆ), 500 (ಮಾನನಷ್ಟ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

“ದಿ ವೈರ್ ಮತ್ತು ಕೆಲವು ಅಪರಿಚಿತ ವ್ಯಕ್ತಿಗಳು ನನ್ನ ಖ್ಯಾತಿಯನ್ನು ಕೆಡಿಸುವ ಉದ್ದೇಶದಿಂದ ಕ್ರಿಮಿನಲ್ ಪಿತೂರಿಯನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ, ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ವರದಿಯಲ್ಲಿ ಸೇರಿಸಿದೆ ಮತ್ತು ನನ್ನನ್ನು ಸಿಲುಕಿಸಲು ಪುರಾವೆಗಳನ್ನು ಸೃಷ್ಟಿಸಿದೆ. ಹಾಗಾಗಿ, ದಿ ವೈರ್ ಮತ್ತು ಅದರ ನಿರ್ವಹಣೆ/ವರದಿಗಾರರ ವಿರುದ್ಧ ಸೂಕ್ತ ಕಾನೂನು ಪರಿಹಾರಗಳನ್ನು ಹುಡುಕುವುದಕ್ಕಿಂತ ನನಗೆ ಬೇರೆ ಆಯ್ಕೆಗಳಿಲ್ಲ.” ಎಂದು ಮಾಳವಿಯಾ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನ್ನ ಪ್ರತಿಷ್ಠೆಗೆ ಧಕ್ಕೆ ತರುವಂತಹ ಸುಳ್ಳು ಸುದ್ದಿಗಳನ್ನು ವೈರ್ ಪ್ರಕಟಿಸಿದೆ ಎಂದು ಮಾಳವೀಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಟೆಕ್ ಫಾಗ್ ಆಪ್ ಸ್ಟೋರಿ "ಸುಳ್ಳು ಮತ್ತು ಕಟ್ಟುಕಥೆ" ಎಂದು ಹೇಳುವ ಮೂಲಕ ವೈರ್ ಈ ಹಿಂದೆ ನಕಲಿ ಸುದ್ದಿಗಳನ್ನು ಪ್ರಕಟಿಸಿದೆ ಎಂದು ಅವರು ಆರೋಪಿಸಿದರು.

Similar News