ಡಿ.ಕೆ. ಶಿವಕುಮಾರ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ: ದಿಲ್ಲಿ ಹೈಕೋರ್ಟ್‌ನಿಂದ ಇಡಿಗೆ ನೋಟಿಸ್‌

ʼಚುನಾವಣೆಗೆ ಮುಂಚೆ ಬಂಧಿಸುವ ಉದ್ದೇಶʼ ಎಂದ ಕಪಿಲ್‌ ಸಿಬಲ್

Update: 2022-11-02 12:09 GMT

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ತನಿಖೆಯನ್ನು ಪ್ರಶ್ನಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ ಕೆ ಶಿವಕುಮಾರ್‌(DK Shivakumar) ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಇಂದು ಕೈಗೆತ್ತಿಕೊಂಡಿರುವ ದಿಲ್ಲಿ ಹೈಕೋರ್ಟ್‌ ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿ ಅದರ ಪ್ರತಿಕ್ರಿಯೆಯನ್ನು ಕೋರಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 15 ಕ್ಕೆ ಮುಂದೂಡಲಾಗಿದೆ.

2018 ರಲ್ಲಿ ನಿರ್ದೇಶನಾಲಯ ತನಿಖೆ ಅದಾಗಲೇ ನಡೆಸಿದ್ದ ಅದೇ ʼಅಪರಾಧದ ಕುರಿತಂತೆ ಮರುತನಿಖೆಯನ್ನುʼ 2020 ರಲ್ಲಿ ನಡೆಸುತ್ತಿದೆ ಎಂದು ವಾದಿಸಿ ಶಿವಕುಮಾರ್‌ ಅವರು  ದಿಲ್ಲಿ ಹೈಕೋರ್ಟಿನ ಕದ ತಟ್ಟಿದ್ದರಲ್ಲದೆ ಇದೇ ಕಾರಣಕ್ಕಾಗಿ ತಮ್ಮ ವಿರುದ್ಧದ ತನಿಖೆ ಹಾಗೂ 2020 ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್‌ ರದ್ದುಗೊಳಿಸಬೇಕೆಂದು ಕೋರಿದ್ದರು.

ಶಿವಕುಮಾರ್‌ ಅವರು ತಮ್ಮ ಅರ್ಜಿಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯಿದೆ 2009 ರ  ಸೆಕ್ಷನ್‌ 13 ರ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್‌ 13 ಅನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಶೆಡ್ಯೂಲ್‌ ಅನ್ನು ತಿದ್ದುಪಡಿ ಮಾಡಿ ಅದಕ್ಕೆ ಸೇರಿಸಲಾಗಿದ್ದ ಹಿನ್ನೆಲೆಯಲ್ಲಿ ಈ ವಿಷಯವನ್ನು ಶಿವಕುಮಾರ್‌ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇಂದಿನ ವಿಚಾರಣೆ ವೇಳೆ ಈ ಕುರಿತು ಪ್ರಸ್ತಾಪಿಸಿದ ಶಿವಕುಮಾರ್‌ ಪರ ವಕೀಲ ಕಪಿಲ್‌ ಸಿಬಲ್‌, ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿಯಲ್ಲಿ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್‌ 13 ಸೇರಿಸಿರುವ ವಿಚಾರ ಪ್ರಸ್ತಾಪಿಸಿದರು.

ʻʻಒಮ್ಮೆ ಒಂದು ಆಸ್ತಿ ಅಕ್ರಮ ಎಂದು ತೀರ್ಮಾನಕ್ಕೆ ಬಂದ ನಂತರ  ಅಕ್ರಮ ಹಣ ವರ್ಗಾವಣೆಯ ಪ್ರಶ್ನೆ ಬರುವುದಿಲ್ಲ,ʼʼ ಎಂದು ಸಿಬಲ್‌ ಹೇಳಿದ್ದಾರಲ್ಲದೆ ಈಗ ಮತ್ತೆ ವಿಚಾರಣೆಯ ಪ್ರಕ್ರಿಯೆ ಆರಂಭಿಸಿರುವುದು ಚುನಾವಣೆಗೆ ಮುಂಚೆ ಶಿವಕುಮಾರ್‌ ಅವರನ್ನು ಬಂಧಿಸಲು," ಎಂದು  ಹೇಳಿದರು.

Similar News