ಇವಿಎಂಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ, ವಿವರಗಳನ್ನು ಕೋರಿದ್ದ ಪಿಐಎಲ್ ಅಂಗೀಕಾರಕ್ಕೆ ಸುಪ್ರೀಂ ನಿರಾಕರಣೆ

Update: 2022-11-02 16:34 GMT

ಹೊಸದಿಲ್ಲಿ,ನ.2: ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳ ಬದಲು ಅಭ್ಯರ್ಥಿಗಳ ಭಾವಚಿತ್ರಗಳು ಮತ್ತು ವೈಯಕ್ತಿಕ ವಿವರಗಳನ್ನು ಪ್ರದರ್ಶಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಬುಧವಾರ ನಿರಾಕರಿಸಿತು.

ಅರ್ಜಿದಾರ ಅಶ್ವಿನಿ ಉಪಾಧ್ಯಾಯ (Ashwini Upadhyay)ಅವರು ಸಲ್ಲಿಸಿರುವ ಅಹವಾಲನ್ನು ಸಂಬಂಧಿತ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಚುನಾವಣಾ ಆಯೋಗದ ವಕೀಲರು ಭರವಸೆ ನೀಡಿದ ಬಳಿಕ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್(U.U.Lalit) ಮತ್ತು ನ್ಯಾ.ಬೇಲಾ ಎಂ.ತ್ರಿವೇದಿ(Dr. Bela M. Trivedi) ಅವರ ಪೀಠವು ಅರ್ಜಿಯನ್ನು ವಿಲೇವಾರಿಗೊಳಿಸಿತು.

ಅಭ್ಯರ್ಥಿಗಳ ವಿವರಗಳನ್ನು ಒದಗಿಸುವುದನ್ನು ಅಗತ್ಯವಾಗಿಸಿದರೆ ವಿಶ್ವಾಸಾರ್ಹತೆ ಇರುವವರಿಗೆ ಮಾತ್ರ ಚುನಾವಣಾ ಟಿಕೆಟ್ ಗಳನ್ನು ನೀಡುವುದು ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಗುತ್ತದೆ ಮತ್ತು ಇದು ರಾಜಕೀಯದಲ್ಲಿ ಅಪರಾಧಿತ್ವವು ನುಸುಳುವುದನ್ನು ಕಡಿಮೆಗೊಳಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಅರ್ಜಿದಾರರು ವ್ಯಕ್ತಪಡಿಸಿರುವ ಕಳಕಳಿಯು ಸ್ವೀಕಾರಾರ್ಹವಾಗಿದೆಯಾದರೂ ಅವರು ಮಂಡಿಸಿದ ವಾದದ ತರ್ಕವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು,ಇವಿಎಮ್ನಲ್ಲಿ ಮತದಾನವು ಚುನಾವಣಾ ಪ್ರಕ್ರಿಯೆಯ ಅಂತ್ಯದಲ್ಲಿ ಬರುತ್ತದೆ ಮತ್ತು ಯಾರಿಗೆ ಮತ ಚಲಾಯಿಸಬೇಕು ಎಂಬ ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಲಾಗಿರುತ್ತದೆ. ಹೀಗಿರುವಾಗ ಚಿಹ್ನೆಯು ಅತ್ಯಂತ ಕುಚೇಷ್ಟೆಯ ಭಾಗವಾಗಿದೆ ಎಂದು ಹೇಳುವುದು ಸರಿಯಲ್ಲ ಎಂದು ತಾನು ಭಾವಿಸಿದ್ದೇನೆ. ಪ್ರತಿಯೊಂದೂ ರಾಜಕೀಯ ಪಕ್ಷಕ್ಕೂ ಒಂದು ಗುರುತಿದೆ. ಚಿಹ್ನೆಯು ಗುರುತಿಸುವ ಅತ್ಯಂತ ಸುಲಭದ ಅಂಶವಾಗಿದೆ ಎಂದು ಹೇಳಿದರು.

Similar News