ಶಿವಮೊಗ್ಗ | ಸರ್ಕಾರಿ ವಾಹನದಲ್ಲಿ ಬಂದ ನಕಲಿ ಅಧಿಕಾರಿಯಿಂದ ಅಂಗಡಿ ಮಾಲಕರಿಗೆ ದಂಡದ ಬೆದರಿಕೆ: ಪ್ರಕರಣ ದಾಖಲು

Update: 2022-11-02 17:52 GMT

ಶಿವಮೊಗ್ಗ,ನ.2: ಸರಕಾರಿ ವಾಹನದಲ್ಲಿ ಬಂದ ನಕಲಿ ಅಧಿಕಾರಿಯೊಬ್ಬ ಅಂಗಡಿ ಮಾಲಕರಿಗೆ ದಂಡ ಹಾಕುವ ಬೆದರಿಕೆ ಒಡ್ಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ನಕಲಿ ಅಧಿಕಾರಿ ದಂಡದಿಂದ ವಿನಾಯಿತಿ ಬೇಕಿದ್ದರೆ ತನಗೆ ಹಣ ನೀಡಬೇಕು ಎಂದು ಮಾಲಕರಿಗೆ ಸೂಚನೆ ಕೊಟ್ಟಿದ್ದಾನೆ. ಆರೋಪಿಯ ಅಸಲಿ ಬಣ್ಣ ಬಯಲಾಗುತ್ತಿದ್ದಂತೆ ಅಂಗಡಿ ಮಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ವಿನೋಬನಗರದ ಎಪಿಎಂಸಿ ಬಳಿ 100 ಅಡಿ ರಸ್ತೆಯಲ್ಲಿರುವ ಗೊರೂರು ಮಾರ್ಟ್‌ನಲ್ಲಿ ಈ ಘಟನೆ ಸಂಭವಿಸಿದೆನ್ನಾಗಿದ್ದು,  ಮಾಲಕ ಕುಮಾರ್ ಅವರಿಂದ ಹಣ ವಸೂಲಿಗೆ ಯತ್ನಿಸಿದ ನಕಲಿ ಆಹಾರ ನಿರೀಕ್ಷಕ ಗಂಗಾಧರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ರವಿವಾರ ಸಂಜೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ನಾಮಫಲಕ ಇರುವ ಜೀಪಿನಲ್ಲಿ ಬಂದ ವ್ಯಕ್ತಿಯೊಬ್ಬ, ಗೊರೂರು ಮಾರ್ಟ್ ಒಳಗೆ ಬಂದು ತನ್ನನ್ನು ಆಹಾರ ನಿರೀಕ್ಷಕ ಗಂಗಾಧರ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಂಗಡಿಯೊಳಗೆ ಪರಿಶೀಲನೆ ನಡೆಸಿದ್ದಾನೆ. ರಶೀದಿ ಪುಸ್ತಕ ಕೈಯಲ್ಲಿ ಹಿಡಿದು 25 ಸಾವಿರ ರೂಪಾಯಿ ದಂಡ ವಿಧಿಸಬೇಕಾಗುತ್ತದೆ ಎಂದು ಗೊರೂರು ಮಾರ್ಟ್ ಮಾಲಕ ಕುಮಾರ್ ಅವರಿಗೆ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

ದಂಡದಿಂದ ವಿನಾಯಿತಿ ನೀಡಬೇಕಿದ್ದರೆ ತನಗೆ ಹಣ ಕೊಡಬೇಕು ಎಂದು ಸೂಚಿಸಿದ್ದಾನೆ. 10 ರಿಂದ 12 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿ, 2 ಸಾವಿರ ರೂ.ವಸೂಲಿ ಮಾಡಿರುವುದಾಗಿ ಆರೋಪಿಸಲಾಗಿದೆ. ಸೋಮವಾರ ಸಂಜೆ ಗೊರೂರು ಮಾರ್ಟ್ ಮತ್ತೆ ಆಗಮಿಸಿದ ನಕಲಿ ಅಧಿಕಾರಿ ಗಂಗಾಧರನನ್ನು ಸ್ಥಳೀಯರು ಹಿಡಿಯಲು ಯತ್ನಿಸಿದಾಗ ಆತ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

ಆಹಾರ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ತಮ್ಮ ಅಂಗಡಿಗೆ ಬಂದು ದಂಡ ಹಾಕುವುದಾಗಿ ಬೆದರಿಕೆ ಒಡ್ಡಿ, ಹಣ ಪಡೆದ ಆರೋಪಿ ವಿರುದ್ಧ ಕುಮಾರ್ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ನಕಲಿ ಅಧಿಕಾರಿಗೆ ಸರಕಾರಿ ವಾಹನ ಹೇಗೆ ಸಿಕ್ಕಿತು ಎನ್ನುವುದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Similar News