ಶಾಸಕ ಸಿ.ಟಿ.ರವಿ ಸೂಚನೆ ಮೇರೆಗೆ ಧರಣಿ ನಿರತ ಬಂಧನ: ಆರೋಪ

ದಲಿತ ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಪ್ರಕರಣ

Update: 2022-11-02 18:00 GMT

ಚಿಕ್ಕಮಗಳೂರು, ನ.2: 'ದಲಿತ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಶಾತಿಯುತ ಹೋರಾಟ ಮಾಡುತ್ತಿದ್ದವರನ್ನು ಶಾಸಕ ಸಿ.ಟಿ.ರವಿ ಸೂಚನೆ ಮೇರೆಗೆ ಪೊಲೀಸರು ಬಂಧಿಸಿದ್ದಾರೆ' ಎಂದು ಭೀರ್ಮ್ ಆರ್ಮಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಹೊನ್ನೇಶ್ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ ಜನಪ್ರತಿನಿಧಿಗಳು ದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಹುಣಸೇಹಳ್ಳಿಪುರ ಗ್ರಾಮದಲ್ಲಿ ದಲಿತ ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿರುವ ಕಾಫಿ ಎಸ್ಟೇಟ್ ಮಾಲಕನನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯವಹಿಸಿದೆ. ಇದನ್ನು ಖಂಡಿಸಿ ಆರೋಪಿಗಳನ್ನು ಬಂಧಿಸಬೇಕೆಂದು ಅಗ್ರಹಿಸಿ ಕಳೆದ ಒಂದು ವಾರದಿಂದ ಅಹೋರಾತ್ರಿ ನಡೆಸಿದ್ದು, ನ.1ರಂದು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಹೋರಾಟಗಾರರನ್ನು ಶಾಸಕ ಸಿ.ಟಿ.ರವಿ ಅವರ ಸೂಚನೆಯಂತೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಶಾಸಕ ಸಿ.ಟಿ.ರವಿಗೆ ಮನವಿ ನೀಡಲು ಹೋಗಿದ್ದ ವೇಳೆಯೂ ಪೊಲೀಸರು ದಲಿತ ಮುಖಂಡರನ್ನು ಬಂಧಿಸಿದ್ದಾರೆ. ಪೊಲೀಸರು ಶಾಸಕ ಸಿ.ಟಿ.ರವಿ ಅಣತಿ ಮೇರೆಗೆ ದಲಿತ ಹೋರಾಟಗಾರರನ್ನು ಹತ್ತಿಕ್ಕಲು ಮುಂದಾಗಿದ್ದಾರೆ' ಎಂದು ಆರೋಪಿಸಿದರು. 

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಸಿ.ಟಿ.ರವಿ ಅವರು ದಲಿತರೆಲ್ಲರೂ ಬಿಜೆಪಿಯೊಂದಿಗೆ ಇದ್ದಾರೆ. ರಾಜ್ಯ ಸರಕಾರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರುವ ಬಳಿಕ ಬಿಜೆಪಿ ಪರ ದಲಿತರು ನಿಂತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಶಾಸಕ ಸಿ.ಟಿ.ರವಿ ಅವರ ಈ ಮಾತಿನ ಹಿಂದೆ ದಲಿತರು ಬಿಜೆಪಿಯಿಂದ ದೂರ ಆಗುತ್ತಿರುವ ಆತಂಕ ಇದೆ. ನಿಜವಾಗಿಯೂ ದಲಿತರು ಬಿಜೆಪಿ ಪಕ್ಷದೊಂದಿಗೆ ಇಲ್ಲ. ಇರುವ ಕೆಲವೇ ಕೆಲ ದಲಿತರು ಬಿಜೆಪಿಯವರ ಅಧಿಕಾರ, ಹಣದ ಆಸೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರಷ್ಟೇ. ದಲಿತರ ಶಕ್ತಿ ಏನೆಂದು ಶಾಸಕ ಸಿ.ಟಿ.ರವಿ ಅವರಿಗೆ ಮುಂದಿನ ಚುನಾವಣೆಯಲ್ಲಿ ತಿಳಿಯಲಿದೆ ಎಂದರು.

ರಾಜ್ಯ ಸರಕಾರ ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಪರವಾಗಿ ದಲಿತರ ಒಲವು ಹೆಚ್ಚಿದೆ ಎಂದಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಹೋರಾಟಗಾರರು ಚಳವಳಿ ಮಾಡಿದ ಪರಿಣಾಮ ಸರಕಾರ ಮೀಸಲಾತಿ ಹೆಚ್ಚಳ ಮಾಡಿದೆ, ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವುದಿದ್ದರೇ ಪರಿಶಿಷ್ಟ ಜಾತಿ ಮೀಸಲಾತಿ ಶೇ.22 ಆಗಬೇಕು, ಪರಿಶಿಷ್ಟ ಪಂಗಡದ ಮೀಸಲಾತಿ ಶೇ.9ಕ್ಕೆ ಏರಿಕೆಯಾಗಬೇಕು, ಬಿಜೆಪಿ ಸರಕಾರ ನಿಜವಾಗಿಯೂ ದಲಿತರ ಪರ ಇದ್ದಲ್ಲಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಭೀರ್ಮ್ ಆರ್ಮಿ ಮುಖಂಡರಾದ ರಮೇಶ್, ಸತೀಶ್‍ಕೂದುವಳ್ಳಿ, ಪ್ರವೀಣ್‍ಕುಮಾರ್, ರಾಕೇಶ್‍ಮುಗುಳವಳ್ಳಿ, ದಿಲೀಪ್ ಮತ್ತಿತರರಿದ್ದರು.

''ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೂಡಿಗೆರೆ, ಚಿಕ್ಕಮಗಳೂರು ಕ್ಷೇತ್ರದಲ್ಲಿ ದಲಿತ ಸಮುದಾಯದ ಅಭ್ಯರ್ಥಿಯನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚರ್ಚಿಸಲಾಗಿದೆ. ಈ ಮೂಲಕ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತರ ಮತಗಳು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಾಲಾಗುವುದನ್ನು ತಡೆಯಲಾಗುವುದು. ಈ ಪಕ್ಷಗಳಿಗೆ ದಲಿತರ ಓಟು ಬೇಕೆ ಹೊರತು, ದಲಿತ ಏಳಿಗೆ ಬೇಕಾಗಿಲ್ಲ. ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ದಲಿತರಾಗಿದ್ದರೂ ದಲಿತರ ಮೇಲಿನ ದೌರ್ಜನ್ಯ ಘಟನೆಗಳ ಬಗ್ಗೆ ಮೌನವಹಿಸುತ್ತಿದ್ದಾರೆ. ಇಂತಹ ಗೂಸೊಂಬೆ ದಲಿತ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು''.

- ಹೊನ್ನೇಶ್
 

Similar News