ಮುರುಘಾಶ್ರೀಗೆ ಜೈಲಿನಲ್ಲಿ ವಿಶೇಷ ಆತಿಥ್ಯ: ಕ್ರಮಕ್ಕೆ ಹೈಕೋರ್ಟ್ ಸಿಜೆ, ಗೃಹ ಸಚಿವರಿಗೆ ಮನವಿ

Update: 2022-11-04 18:36 GMT

ಬೆಂಗಳೂರು, ನ.4: ಪೊಕ್ಸೊ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಆರೋಪದಡಿ ಕಾರಾಗೃಹದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶ್ರೀಗಳಿಗೆ ವಿಶೇಷ ಆತಿಥ್ಯ ಕಲ್ಪಿಸಲಾಗುತ್ತಿದೆ. ಹೀಗಾಗಿ, ಚಿತ್ರದುರ್ಗ ಬಂದಿಖಾನೆಯ ಸೂಪರಿಂಟೆಂಡೆಂಟ್ ವಿರುದ್ಧ ಸೂಕ್ತ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಬೇಕೆಂದು ಆರ್‍ಟಿಐ ಕಾರ್ಯಕರ್ತ ಟಿ. ನರಸಿಂಹಮೂರ್ತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ, ಗೃಹ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. 

ಚಿತ್ರದುರ್ಗ ಬಂದಿಖಾನೆಯ ಸೂಪರಿಂಟೆಂಡೆಂಟ್ ಅವರು ಕಾರಾಗೃಹ ಕೈಪಿಡಿ ಉಲ್ಲಂಘಿಸಿರುವ ಕುರಿತ ಅಧಿಕೃತ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಅವರು ಹೈಕೋರ್ಟ್ ಸಿಜೆ ಪಿ.ಬಿ.ವರಾಳೆ ಅವರಿಗೆ ಒಗದಿಸಿದ್ದಾರೆ. 

ನರಸಿಂಹಮೂರ್ತಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಚಿತ್ರದುರ್ಗ ಜಿಲ್ಲಾ ಜೈಲು ಸೂಪರಿಂಟೆಂಡೆಂಟ್ ಅವರಿಂದ ಪಡೆದಿರುವ ದಾಖಲೆಗಳ ಅನುಸಾರ ಮುರುಘಾ ಶ್ರೀಗಳನ್ನು 2022ರ ಸೆ.7ರಿಂದ ಸೆ.29ರ ಮಧ್ಯದ 23 ದಿನಗಳ ಅವಧಿಯಲ್ಲಿ ಮುರುಘಾಮಠದ ಹಂಗಾಮಿ ಆಡಳಿತಾಧಿಕಾರಿ ಎಸ್.ಬಿ.ವಸ್ತ್ರದಮಠ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಬಸವ ಮಾಚಿದೇವ ಸ್ವಾಮಿ, ಬಸವ ಶಾಂತಲಿಂಗ ಸ್ವಾಮಿ ಸೇರಿ ಒಟ್ಟು 20 ಜನರು ಭೇಟಿ ಮಾಡಿದ್ದಾರೆ. 

ಮಾದರಿ ಜೈಲು ಕೈಪಿಡಿ ಅನುಸಾರ ಕೈದಿಗಳ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು ಮತ್ತು ಕಾನೂನು ಸಲಹೆಗಾರರು ಹದಿನೈದು ದಿನಗಳಲ್ಲಿ ಒಮ್ಮೆ ಮಾತ್ರವೇ ಕಾರಾಗೃಹದಲ್ಲಿ ಸಂದರ್ಶಿಸಲು ಅವಕಾಶವಿದೆ. ಆದರೆ, ಈ ಕೇಸ್‍ನಲ್ಲಿ ಶ್ರೀಗಳನ್ನು ನಿಯಮ ಮೀರಿ ಭೇಟಿಯಾಗಿದ್ದು, ಇದು ಜೈಲಿನಲ್ಲಿ ಅವರಿಗೆ ವಿಶೇಷ ಆತಿಥ್ಯ ನೀಡುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.  ಕಾರಾಗೃಹಗಳ ಎಡಿಜಿಪಿ ಮತ್ತು ಐಜಿ ಅವರನ್ನು ಉದ್ದೇಶಿಸಿ ಬರೆಯಲಾಗಿರುವ ಈ ಮನವಿ ಪತ್ರದ ಪ್ರತಿಯನ್ನು ಸಿಜೆ ಮತ್ತು ಗೃಹ ಸಚಿವರಿಗೆ ರವಾನಿಸಲಾಗಿದೆ.  

Similar News