ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿತ್ತು: ಸುಪ್ರೀಂ ಕೋರ್ಟ್

1992-93ರ ಮುಂಬೈ ಗಲಭೆ ಪ್ರಕರಣ

Update: 2022-11-05 12:26 GMT

ಹೊಸದಿಲ್ಲಿ: 1992-93ರ ಮುಂಬೈ ಗಲಭೆಗಳ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ರಾಜ್ಯ ಸರಕಾರವು ವಿಫಲಗೊಂಡಿತ್ತು ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಗಲಭೆಗಳಲ್ಲಿ ಮೃತಪಟ್ಟವರಿಗೆ ಮತ್ತು ನಾಪತ್ತೆಯಾದವರಿಗೆ ಪರಿಹಾರ ಪಾವತಿಯನ್ನು ಖಚಿತಪಡಿಸುವಂತೆ ಅದು ನಿರ್ದೇಶನಗಳನ್ನು ಹೊರಡಿಸಿದೆ.

1992 ಡಿಸೆಂಬರ್ ಮತ್ತು 1993 ಜನವರಿಯಲ್ಲಿ ಸಂಭವಿಸಿದ್ದ ಭಾರೀ ಪ್ರಮಾಣದ ಹಿಂಸಾಚಾರಗಳಿಗೆ ಕೆಲವು ಗುಂಪುಗಳು ಹೊಣೆಯಾಗಿದ್ದವು ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯವು ಹೇಳಿತು.

ಇಂತಹ ವೈಫಲ್ಯವು ಜನರ ಸಂಕಷ್ಟಗಳಿಗೆ ಮೂಲ ಕಾರಣವಾಗಿದೆ ಮತ್ತು ಸಂತ್ರಸ್ತ ಜನರಿಗೆ ರಾಜ್ಯ ಸರಕಾರದಿಂದ ಪರಿಹಾರವನ್ನು ಕೋರುವ ಹಕ್ಕು ಇದೆ ಎಂದು ನ್ಯಾ.ಎಸ್.ಕೆ.ಕೌಲ್ ನೇತೃತ್ವದ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಗಲಭೆಗಳಿಂದ ಸಂತ್ರಸ್ತರಿಗೆ ಮತ್ತು ನಾಪತ್ತೆಯಾಗಿರುವ ವ್ಯಕ್ತಿಗಳ ಉತ್ತರಾಧಿಕಾರಿಗಳಿಗೆ ಪರಿಹಾರಗಳನ್ನು ಪಾವತಿಸಲು ಅನುಕ್ರಮವಾಗಿ 1993 ಮತ್ತು 1999ರಲ್ಲಿ ಸರಕಾರಿ ನಿರ್ಣಯಗಳನ್ನು ಪ್ರಕಟಿಸಲಾಗಿತ್ತು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಗಮನಿಸಿದೆ.
ಗಲಭೆಗಳ ಸಂದರ್ಭ 900 ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಹಿಂಸಾಚಾರ ಅಥವಾ ಪೊಲೀಸ್ ಗೋಲಿಬಾರ್ಗಳಲ್ಲಿ 2,036 ಜನರು ಗಾಯಗೊಂಡಿದ್ದರು ಎನ್ನುವುದನ್ನೂ ನ್ಯಾಯಾಲಯವು ಗಮನಿಸಿದೆ.

ನಾಪತ್ತೆಯಾಗಿರುವ 168 ಜನರ ಪೈಕಿ 60 ಜನರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸಲಾಗಿದೆ ಎನ್ನುವುದನ್ನು ಉಲ್ಲೇಖಿಸಿದ ನ್ಯಾಯಾಲಯವು ಇತರ 108 ಜನರ ಕಾನೂನುಬದ್ಧ ವಾರಸುದಾರರನ್ನು ಪತ್ತೆ ಹಚ್ಚಲು ಸರ್ವ ಪ್ರಯತ್ನಗಳನ್ನು ಮಾಡುವಂತೆ ಮತ್ತು ಅವರಿಗೆ ಬಡ್ಡಿಸಹಿತ ಪರಿಹಾರವನ್ನು ಪಾವತಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಕರಣಗಳು ಬಾಕಿಯಿರುವ ಸಂಬಂಧಿತ ನ್ಯಾಯಾಲಯಗಳಿಗೆ ಅಗತ್ಯ ಸೂಚನೆಗಳನ್ನು ಹೊರಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಈ ತೀರ್ಪಿನಲ್ಲಿ ನೀಡಲಾಗಿರುವ ನಿರ್ದೇಶನಗಳ ಅನುಷ್ಠಾನದ ಮೇಲೆ ನಿಗಾಯಿರಿಸುವಂತೆ ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯ ನೇತೃತ್ವದ ಸಮಿತಿಗೆ ನ್ಯಾಯಾಲಯವು ಸೂಚಿಸಿದೆ.

ಸುಪ್ರೀಂ ಕೋರ್ಟ್ ಆದೇಶದಲ್ಲಿಯ ಮುಖ್ಯಾಂಶಗಳು

ಎರಡನೇ ಸರಕಾರಿ ನಿರ್ಣಯವನ್ನು ಹೊರಡಿಸಿದ್ದ 1998,ಜು.22ರಿಂದ ಆರು ತಿಂಗಳ ಅವಧಿ ಮುಕ್ತಾಯಗೊಂಡಾಗಿನಿಂದ ವಾರ್ಷಿಕ ಶೇ.9 ಬಡ್ಡಿಯನ್ನು ಪಾವತಿಸಬೇಕು. ಇನ್ನು ಮುಂದೆ ಗುರುತಿಸಲಾಗುವ ಸಂತ್ರಸ್ತರಿಗೂ 1994, ಜ.8ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.9 ಬಡ್ಡಿಯನ್ನು ಪಾವತಿಸಬೇಕು.

​►ರಾಜ್ಯ ಸರಕಾರವು ಪರಿಹಾರ ಮತ್ತು/ಅಥವಾ ಬಡ್ಡಿಯನ್ನು ಪಾವತಿಸುವ ಸಮಗ್ರ ಪ್ರಕ್ರಿಯೆಯನ್ನು ಒಂಭತ್ತು ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕು.

​►ರಾಜ್ಯ ಸರಕಾರವು ತಲೆಮರೆಸಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಅವರ ವಿರುದ್ಧ ವಿಚಾರಣೆಯನ್ನು ಮುಂದುವರಿಸಲು ನ್ಯಾಯಾಲಯಗಳಿಗೆ ನೆರವಾಗಲು ವಿಶೇಷ ಘಟಕವೊಂದನ್ನು ತಕ್ಷಣ ರಚಿಸಬೇಕು.

​►ನೇಮಕಗೊಂಡಿದ್ದ ಆಯೋಗವು ಪೊಲೀಸ್ ಪಡೆಯಲ್ಲಿ ಸುಧಾರಣೆಗಳ ಕುರಿತು ಮಾಡಿರುವ ಮತ್ತು ರಾಜ್ಯ ಸರಕಾರವು ಅಂಗೀಕರಿಸಿರುವ ಎಲ್ಲ ಶಿಫಾರಸುಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು.

​►ರಾಜ್ಯ ಸರಕಾರವು ಹೆಸರುಗಳು ಮತ್ತು ವಿಳಾಸಗಳು ಸೇರಿದಂತೆ ನಾಪತ್ತೆಯಾಗಿರುವ 108 ಜನರ ವಿವರಗಳು, ಪರಿಹಾರದಿಂದ ವಂಚಿತರಾಗಿರುವ ಅವರ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಲು ಮಾಡಲಾಗಿರುವ ಪ್ರಯತ್ನಗಳು ಹಾಗೂ ದಿನಾಂಕಗಳೊಂದಿಗೆ ಪರಿಹಾರವನ್ನು ಪಾವತಿಸಲಾದ ಅಥವಾ ಪಾವತಿಸಿರದ ಸಂತ್ರಸ್ತರ ವಿವರಗಳನ್ನು ಒಳಗೊಂಡ ವರದಿಯನ್ನು ಸಮಿತಿಗೆ ಸಲ್ಲಿಸಬೇಕು.

Similar News