'ಶಾಲೆಗಳಲ್ಲಿ 10 ನಿಮಿಷಗಳ ಧ್ಯಾನ' ಸುತ್ತೋಲೆ ಹಿಂಪಡೆಯುವಂತೆ ಒತ್ತಾಯ

ರಾಜ್ಯದ ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರು, ಸಾಹಿತಿಗಳಿಂದ ಸಿಎಂಗೆ ಬಹಿರಂಗ ಪತ್ರ

Update: 2022-11-07 08:31 GMT

ಬೆಂಗಳೂರು: "ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಧೃಡತೆಗಾಗಿ ಶಾಲೆಗಳಲ್ಲಿ 10 ನಿಮಿಷಗಳ ಧ್ಯಾನ ಮಾಡಬೇಕೆಂಬ  ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ಹಿಂತೆದುಕೊಳ್ಳಬೇಕೆಂದು ಒತ್ತಾಯಿಸಿ ರಾಜ್ಯದ ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರು, ಸಾಹಿತಿಗಳು 20ಕ್ಕೂ ಹೆಚ್ಚಿನ ಬರಹಗಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಈ ಸುತ್ತೋಲೆಯು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆಯ ಉಲ್ಲಂಘನೆಯಾಗಿದ್ದು  ಅದನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ದಿನಾಂಕ 20.10.2022ರಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ  ಬಿ. ಸಿ. ನಾಗೇಶ್ ಅವರು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಧೃಡತೆಗಾಗಿ ಶಾಲೆಗಳಲ್ಲಿ ಧ್ಯಾನ ಮಾಡಬೇಕು ಎಂದು  ಸುತ್ತೋಲೆ ಹೊರಡಿಸಲು ಶಿಕ್ಷಣ ಸಚಿವರು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಮಕ್ಕಳಿಗೆ ಧ್ಯಾನ ಮಾಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರ ಸಹಿ ಇರುವ ಮನವಿ ಪತ್ರವೊಂದು ಮಾನ್ಯ ಶಿಕ್ಷಣ ಸಚಿವರಿಗೆ ಬಂದಿರುತ್ತದೆ.

ಆದರೆ , ನಮ್ಮ ಪ್ರಶ್ನೆಯೆಂದರೆ ಇದನ್ನು ಯಾರು ನಿರ್ಧರಿಸಬೇಕು?, ಧ್ಯಾನ ನಡೆಸಬೇಕೆಂದು ಯಾವ ಶಿಕ್ಷಣ ತಜ್ಞರು, ಮಕ್ಕಳ ತಜ್ಞರು ಶಿಫಾರಸು ಮಾಡಿದ್ದಾರೆ?, ಮಕ್ಕಳ ಏಕಾಗ್ರತೆಗಾಗಿ ಧ್ಯಾನ ಪರಿಹಾರವೆಂದು ಯಾವ ವೈಜ್ಞಾನಿಕ ಸಂಶೋಧನೆಗಳಲ್ಲಿ ವಿವರಿಸಲಾಗಿದೆ? ಯಾವ ಮನೋವೈದ್ಯರು ಇದನ್ನು ಸೂಚಿಸಿದ್ದಾರೆ? ಈ ಕುರಿತು ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕೆಂದು ಕೋರುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇಲ್ಲವೆಂದರೆ ಯಾವ ಮಾನದಂಡಗಳನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎನ್ನುವುದನ್ನು ಸ್ಪಷ್ಟಪಡಿಸಬೇಕಾಗುತ್ತದೆ.  ಬಹುತೇಕ ಮನೋವೈದ್ಯರ ಪ್ರಕಾರ ಆನ್ ಲೈನ್ ಶಿಕ್ಷಣದಿಂದ ಮಕ್ಕಳ ಖಿನ್ನತೆಗೆ ಒಳಗಾಗಿದ್ದಾರೆ.  ಶಿಕ್ಷಣ ಇಲಾಖೆಯಿಂದ ಈ ಕುರಿತು ಅಧ್ಯಯನ ಮಾಡಬೇಕೆಂದು ಕೋರುತ್ತೇವೆ. ಕೋವಿಡ್ ಕಾಯಿಲೆಯ ಕಾರಣದಿಂದ ಉಂಟಾದ ಕಲಿಕೆಯ ನಷ್ಟ ಮತ್ತು ಕಲಿಕೆಯ ಅಂತರದಿಂದಲೂ ಸಹ ಮಕ್ಕಳ ಏಕಾಗ್ರತೆಗೆ  ಭಂಗ ಬಂದಿರುತ್ತದೆ. ಇದನ್ನು ಸರಿಪಡಿಸುವ ಕಡೆಗೆ ಕಾರ್ಯಪ್ರವೃತ್ತರಾಗುವದರ ಬದಲಿಗೆ ಯಾವುದೇ ಬೆಂಬಲಿತ ಆಧಾರವಿಲ್ಲದ ಧ್ಯಾನದಂತಹ ವಿವಾದ ನಡೆಗೆ ಮುಂದಾಗಬೇಡಿ ಎಂದು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಶಿಕ್ಷಣ ಇಲಾಖೆಯ ಧ್ಯಾನ ಮಾಡುವ ನಿರ್ಧಾರದಿಂದ ಸಂವಿಧಾನದ ಪರಿಚ್ಛೇದ 29(1)ರ  'ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೂ ಅವರದೇ ಆದ ಸಂಸ್ಕೃತಿ, ಭಾಷೆ, ಲಿಪಿ ಇರುತ್ತದೆ. ಈ ಭಿನ್ನತೆಯನ್ನು, ಬಹು ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಅವರ ಹಕ್ಕು'  ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಇದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ ಕನಿಷ್ಟ ಮೂಲಭೂತ ಅಗತ್ಯವಾದ ನೀರಿನ ವ್ಯವಸ್ಥೆ ಇರುವ  ಸ್ವಚ್ಛ ಶೌಚಾಲಯಗಳಿಲ್ಲ. ಇತರ ಸೌಕರ್ಯಗಳಿಲ್ಲ, ಶಿಕ್ಷಕರಿಲ್ಲ, ಗುಣ ಮಟ್ಟದ ಕಲಿಕೆಯಿಲ್ಲ. ಬಜೆಟ್ ನಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಅನುದಾನ ಕೊಡುತ್ತಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವದರ ಬದಲಿಗೆ ಹೀಗೆ ಅನವಶ್ಯಕ ವಿವಾದಗಳನ್ನು ಹುಟ್ಟು ಹಾಕುತ್ತಿರುವುದು ಆಪೇಕ್ಷಣೀಯವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಹಿಂದೆ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ, ತಜ್ಞರೊಂದಿಗೆ, ಶಿಕ್ಷಣದ ಭಾಗೀದಾರರೊಂದಿಗೆ ಸಮಾಲೋಚಿಸದೆ ಸ್ವ ಹಿತಾಸಕ್ತಿಗಾಗಿ ಉನ್ನತ ಶಿಕ್ಷಣದಲ್ಲಿ ಎನ್ ಇಪಿ 2020ನ್ನು ಜಾರಿಗೊಳಿಸಿದ ಕಾರಣಕ್ಕೆ ಇಂದು ವಂಚಿತ ಸಮುದಾಯಗಳ, ಬಡ ಕುಟುಂಬಗಳ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನದಲ್ಲಿದೆ.  ಪಠ್ಯಪುಸ್ತಕ ಪುನರ್ ಪರಿಶೀಲನೆ ನೆಪದಲ್ಲಿ  ಅನಧಿಕೃತ ಸಮಿತಿಯನ್ನು ರಚನೆ ಮಾಡಿ ಅದರ ಸಂವಿಧಾನ ವಿರೋಧಿ ಶಿಪಾರಸ್ಸುಗಳಿಂದ ವಿವಾದ ಉಂಟಾಗಿದ್ದು, ನಂತರ ತೀವ್ರ ವಿರೋಧ ಬಂದ ನಂತರ ತೇಪೆ ಹಾಕುವ ಕೆಲಸ ಮಾಡಲಾಯಿತು. ಇತ್ತೀಚೆಗೆ ಪೋಷಕರಿಂದ ಪ್ರತಿ ತಿಂಗಳು ರೂ.100 ಸಂಗ್ರಹಿಸಬೇಕೆಂದು ಶಿಕ್ಷಣ ಇಲಾಖೆಯು ಎಸ್ ಡಿಎಂಸಿಗೆ  ಹೊರಡಿಸಿದ ಸುತ್ತೋಲೆಯು ಸಹ ವಿವಾದಕ್ಕೆ ಕಾರಣವಾಗಿ ಇದಕ್ಕೂ ತೀವ್ರ ಪ್ರತಿರೋಧ  ಬಂದ ನಂತರ  ಸುತ್ತೋಲೆ ಹಿಂದಕ್ಕೆ ಪಡೆಯಲಾಯಿತು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮೇಲಿನ ಎಲ್ಲಾ ವಿಚಾರಗಳು  ನಿಮ್ಮ ಗಮನಕ್ಕೆ ಬಂದಿರುತ್ತದೆ ಎಂದು ಆಶಿಸುತ್ತೇವೆ.  ಶೈಕ್ಷಣಿಕ ವರ್ಷದ ಕಡೆಯ ಹಂತದಲ್ಲಿ ಈ ರೀತಿಯ ಸುತ್ತೋಲೆ ಹೊರಡಿಸುವುದು ನ್ಯಾಯಯುತಲ್ಲ. ಮಕ್ಕಳ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು  ಈ ಕೂಡಲೇ ಧ್ಯಾನ   ಡೆಸುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಬಹಿರಂಗ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಪತ್ರಕ್ಕೆ ಸಹಿಹಾಕಿದವರು: 

ಡಾ. ಕೆ. ಮರುಳಸಿದ್ಧಪ್ಪ, ಡಾ.ಜಿ.ರಾಮಕೃಷ್ಣ, ಡಾ. ವಿಜಯಾ, ಪ್ರೊ.ಎಸ್. ಜಿ. ಸಿದ್ದರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಕೆ. ಎಸ್. ವಿಮಲ, ಪ್ರೊ.ರಾಜೇಂದ್ರ ಚೆನ್ನಿ, ಮಾವಳ್ಳಿ ಶಂಕರ್, ಡಾ.ವಸುಂಧರಾ ಭೂಪತಿ, ಡಾ.ಮೀನಾಕ್ಷಿ ಬಾಳಿ, ಎಸ್. ವೈ. ಗುರುಶಾಂತ್, ಬಿ. ಶ್ರೀಪಾದ ಭಟ್, ಕೆ. ನೀಲಾ, ವಸಂತರಾಜ ಎನ್.ಕೆ., ಗುರುಪ್ರಸಾದ್ ಕೆರಗೋಡು, ಸುರೇಂದ್ರ ರಾವ್. ಟಿ,  ಆರ್. ರಾಮಕೃಷ್ಣ., ರುದ್ರಪ್ಪ ಹುನಗವಾಡಿ, ಡಾ. ಲೀಲಾ ಸಂಪಿಗೆ, ವಿ. ಪಿ. ನಿರಂಜನಾರಾಧ್ಯ, ಯೋಗಾನಂದ ಬಿ. ಎನ್. , ಶಿವಣ್ಣ, ಎನ್ ಆರ್ ವಿಶುಕುಮಾರ್, ಎನ್. ಗಾಯತ್ರಿ, ಜೆ ಸಿ ಶಶಿಧರ್

ಜಾಗೃತ ನಾಗರಿಕರು, ಕರ್ನಾಟಕ

Similar News