ಸಾಸಿವೆ ಹೊಲದೊಳಗೆ ಪ್ರವೇಶವಾಗುತ್ತಿರುವ ಬಿಟಿ ಭೂತ!

Update: 2022-11-08 05:18 GMT

ಈ ತಳಿಗೆ ಅನುಮತಿ ಕೊಡುವಾಗ, ಇದು ದೊಡ್ಡ ಪ್ರಮಾಣದಲ್ಲಿ ಅಂದರೆ ದೇಸೀ ತಳಿಗಿಂತ 35ಪಟ್ಟು ಹೆಚ್ಚು ಇಳುವರಿ ಕೊಡುವುದರಿಂದ ಖಾದ್ಯ ತೈಲದ ಉತ್ಪಾದನೆ ಹೆಚ್ಚಿಸಿ, ಆಮದು ಪ್ರಮಾಣ ತಗ್ಗಿಸಬಹುದೆಂದು ‘ಆತ್ಮನಿರ್ಭರ’ದ ಕಥೆಯನ್ನೂ ಹೆಣೆಯಲಾಗಿದೆ. ಇದು ದೇಶೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ತಳಿ ಎಂಬುದನ್ನು ಒತ್ತಿಹೇಳಲಾಗುತ್ತಿದೆಯಾದರೂ, ಇದಕ್ಕೆ ಸೇರಿಸಲಾಗಿರುವ ವಂಶವಾಹಿಯ ಹಕ್ಕುಸ್ವಾಮ್ಯ ಹೊಂದಿರುವುದು ಜರ್ಮನಿ ಮೂಲದ ಬಾಯರ್ ಅಗ್ರೋ ಸೈನ್ಸಸ್ ಎಂಬ ಬಹುರಾಷ್ಟ್ರೀಯ ಕಂಪೆನಿ ಎಂಬುದನ್ನು ಮರೆಮಾಚಲಾಗುತ್ತಿದೆ.

ಅಡುಗೆ ಮನೆಯೊಳಗೆ ಒಗ್ಗರಣೆಯ ಸಾಸಿವೆ ಸಿಡಿಯುವಾಗ ತುಂಬಿಕೊಳ್ಳುತ್ತಿದ್ದ ಖಮ್ಮಗಿನ ಖುಷಿಯನ್ನು ಕಸಿಯುವಲ್ಲಿ ಮಹಿಕೋ ಕಂಪೆನಿ ಗೆದ್ದಿದೆ. ಇನ್ನು ಮುಂದೆ ಬರಲಿರುವ ಹೈಬ್ರೀಡ್ ಸಾಸಿವೆ ನಮ್ಮ ನೆಲವನ್ನೇ ವಿಷಮಯವಾಗಿಸಲಿದೆ ಎಂಬುದು ಆತಂಕದ ವಿಚಾರ. ಮಹಿಕೋ ಕಂಪೆನಿ ಅಭಿವೃದ್ಧಿಪಡಿಸಿರುವ ಬಿಟಿ ಸಾಸಿವೆ ಬೀಜ ಬಿತ್ತನೆಗೆ ತಳಿ ಮಾರ್ಪಾಡು ಮೌಲ್ಯಮಾಪನ ಸಮಿತಿ (Genetic Engineering Appraisal Committee/GEAC) ಒಪ್ಪುವುದರೊಂದಿಗೆ ಮತ್ತೊಮ್ಮೆ ಈ ದೇಶದ ಅಮಾಯಕ ರೈತನು ತಲ್ಲಣಗೊಳ್ಳುವಂತಾಗಿದೆ. ಇಂಥದೊಂದು ರಾಕ್ಷಸಿ ತಳಿಯ ಮೊದಲ ಪರಿಣಾಮವೇ ದೇಶೀ ತಳಿಯ ನಾಶ. ಬಿಟಿ ಹತ್ತಿ ವಿಚಾರದಲ್ಲಿ ಏನಾಯಿತೆಂಬುದು ಗೊತ್ತಿದೆ. 

ಬೆಳೆಗೆ ಹಾನಿಕಾರಕ ಕೀಟಗಳ ನಿಯಂತ್ರಣಕ್ಕೆ ಪರಿಸರದೊಳಗೇ ಇರುವ ವ್ಯವಸ್ಥೆಯೊಂದು ಸಹಕರಿಸಿ ರೈತನನ್ನು ಕಾಪಾಡುತ್ತಿತ್ತು. ಆದರೆ ಯಾವಾಗ ಬಿಟಿ ಹತ್ತಿಯಂಥ ಧ್ವಂಸಕಾರಿ ಶೋಧವು ನೈಸರ್ಗಿಕ ಸೂಕ್ಷ್ಮಕುರಿತ ಯಾವ ಅರಿವನ್ನೂ ಒಳಗೊಳ್ಳದೆ ಆಕ್ರಮಿಸತೊಡಗಿತೋ ಆಗ ಬೆಳೆಗೆ ಪೂರಕವಾದ ನೈಸರ್ಗಿಕ ವ್ಯವಸ್ಥೆಯು ಇದ್ದಲ್ಲೇ ನಶಿಸುವಂತಾಯಿತು. ಇಂಥ ಅಪಾಯಗಳನ್ನು ಕಂಡ ಮೇಲೂ ಸರಕಾರದ ಮಟ್ಟದಲ್ಲಿನ ವಿವಿಧ ಪರಿಣತ ಮಂಡಳಿಗಳು ಮಂಕುಬಡಿದುಕೊಂಡು ಕೂತಿವೆ. ಮತ್ತೊಂದು ರಾಕ್ಷಸಿ ತಳಿಗೆ ಬಾಗಿಲು ತೆರೆದಿವೆ. ಹಾಗೆ ನೋಡಿದರೆ ಮಹಿಕೋ ಕಂಪೆನಿಯ ಈ ತಂತ್ರಜ್ಞಾನದ ಬಗ್ಗೆಯೇ ಬಹಳಷ್ಟು ತಕರಾರುಗಳಿವೆ. 

ಸಾಸಿವೆ ಕಾಳನ್ನು ಜೈವಿಕವಾಗಿ ಮಾರ್ಪಡಿಸುವ ಅಗತ್ಯವಾದರೂ ಏನಿತ್ತು ಎಂಬಲ್ಲಿಂದ ಮೊದಲಾಗಿ ಅದರ ಕಸಿಗೊಳಿಸುವಿಕೆಯಲ್ಲಿ ಅನುಸರಿಸಲಾದ ಕ್ರಮದ ಕುರಿತ ತಾತ್ವಿಕ ಪ್ರಶ್ನೆಯವರೆಗೂ ಈ ತಕರಾರುಗಳ ವ್ಯಾಪ್ತಿಯಿದೆ ಮತ್ತು ಇದನ್ನೆಲ್ಲ ಮೀರಿಯೂ ಈ ತಳಿಯನ್ನು ಒಪ್ಪಿಕೊಳ್ಳುವ ಒಂದು ದೊಡ್ಡ ಗುಂಪೇ ರೈತರ ಮಧ್ಯೆಯಿಂದಲೂ ಪ್ರತ್ಯಕ್ಷವಾಗಿರುವುದು ಇನ್ನೊಂದು ಅತಿ.

ಮಣ್ಣೊಳಗಿನ ಬೇಸಿಲಸ್ ಅಮಿಲೊ ಲಿಕ್ವಿಫೇಸಿಯನ್ಸ್ ಎಂಬ ಬ್ಯಾಕ್ಟೀರಿಯಾದ ಅಂಗಾಂಶ (ಡಿಎನ್‌ಎ) ತಂತುಗಳನ್ನು, ದೇಸಿ ಸಾಸಿವೆ ತಳಿಯ ಅಂಗಾಂಶ ತಂತುಗಳೊಂದಿಗೆ ಕಸಿಮಾಡಿ ರೂಪಿಸಲಾಗಿರುವ ಬಿಟಿ ಸಾಸಿವೆ ತಳಿ ಕಳೆನಾಶಕ ಪ್ರತಿರೋಧ ಗುಣದ್ದೆಂದು ವಿವರಿಸಲಾಗಿದೆ. 

ಅಂದರೆ, ಸಾಸಿವೆ ಬೆಳೆಯ ನಡುವೆ ಹುಟ್ಟಿಕೊಳ್ಳುವ ಕಳೆಗಳನ್ನು ನಿವಾರಿಸಲು ಕಳೆನಾಶಕ ಸಿಂಪಡಿಸಿದಾಗ ಕಳೆ ಮಾತ್ರ ಸುಟ್ಟುಹೋಗುತ್ತದೆಯೇ ಹೊರತು ಸಾಸಿವೆ ಗಿಡಗಳ ಮೇಲೆ ಅದು ಯಾವ ಪರಿಣಾಮವನ್ನೂ ಉಂಟುಮಾಡದು ಎಂಬುದನ್ನು ಈ ಹೊಸ ತಳಿಯ ಬಗೆಗಿನ ಹೆಗ್ಗಳಿಕೆ ಅಂಶವಾಗಿ ಹೇಳಲಾಗುತ್ತಿದೆ. ಆದರೆ ತನ್ನ ಸುತ್ತ ಕಳೆ ಬೆಳೆಯದಂತೆ ಕೆಲವು ರಾಸಾಯನಿಕಗಳನ್ನು ಹೊರಸೂಸುವ ಅದರ ಈ ಗುಣವೇ ಅಪಾಯಕ್ಕೆ ಆಹ್ವಾನ ಕೊಡುವಂಥದ್ದೆಂದು ತಜ್ಞರು ಹೇಳುತ್ತಾರೆ. ನೆಲವನ್ನೇ ಬರಡಾಗಿಸಬಲ್ಲ, ಸುತ್ತಲಿನ ಪರಿಸರ ಮತ್ತು ಪಕ್ಷಿಗಳಂಥ ಜೀವಸಂಕುಲಕ್ಕೆ ಅಪಾಯ ತಂದೊಡ್ಡಬಲ್ಲ ಈ ತಂತ್ರಜ್ಞಾನವನ್ನು ನಮ್ಮಲ್ಲಿ ಬಳಸುವುದರ ಬಗ್ಗೆ ಈ ಹಿಂದಿನಿಂದಲೂ ಸಮ್ಮತಿಯಿರಲಿಲ್ಲ. 

2012ರ ಲೋಕಸಭೆ ಸ್ಥಾಯಿ ಸಮಿತಿ, 2013ರ ಸುಪ್ರೀಂ ಕೋರ್ಟ್ ತಾಂತ್ರಿಕ ತಜ್ಞರ ಸಮಿತಿ ಇದರ ಬಳಕೆಗೆ ಅನುಮತಿ ಕೊಡಬಾರದೆಂದೇ ಹೇಳಿದ್ದವು. ಇದು ಎಂತಹ ಅನಪೇಕ್ಷಿತ ತಂತ್ರಜ್ಞಾನವೆಂದರೆ, ದಿಲ್ಲಿಯ ಬಯೊಟೆಕ್ನಾಲಜಿ ವೇದಿಕೆಯ ಸಂಚಾಲಕರೂ ಆಗಿರುವ ಪತ್ರಕರ್ತ ದೇವಿಂದರ್ ಶರ್ಮ ಹೇಳುವಂತೆ, ಪೆನ್ಸಿಲಿನ್ ಚುಚ್ಚುಮದ್ದು ಕೊಡಬೇಕೆಂದು ವೈದ್ಯರು ಸೂಚಿಸಿದರೆ, ಪೆನ್ಸಿಲಿನ್ ಅಂಗಾಂಶ ತಂತುಗಳನ್ನೇ ಮನುಷ್ಯನ ಅಂಗಾಂಶ ತಂತುಗಳ ಜೊತೆ ಕಸಿ ಮಾಡಹೊರಟಂತೆ. 

ಇಂಥದ್ದು ವಿಜ್ಞಾನಕ್ಕೆ ಥರವೇ? ಇನ್ನು ಈ ಹೈಬ್ರೀಡ್ ಸಾಸಿವೆ ಬೆಳೆಗೆ ಕಡ್ಡಾಯವಾಗಿ ಸಿಂಪಡಿಸಬೇಕಿರುವ ಗ್ಲುಪೊಸಿನೇಟ್ ಎಂಬ ಕಳೆನಾಶಕವಂತೂ ಹಲವಾರು ದೇಶಗಳಲ್ಲಿ ನಿಷೇಧಕ್ಕೊಳಗಾದದ್ದು. ಈ ತಳಿಗೆ ಅನುಮತಿ ಕೊಡುವಾಗ, ಇದು ದೊಡ್ಡ ಪ್ರಮಾಣದಲ್ಲಿ ಅಂದರೆ ದೇಸೀ ತಳಿಗಿಂತ 35ಪಟ್ಟು ಹೆಚ್ಚು ಇಳುವರಿ ಕೊಡುವುದರಿಂದ ಖಾದ್ಯ ತೈಲದ ಉತ್ತಾದನೆ ಹೆಚ್ಚಿಸಿ, ಆಮದು ಪ್ರಮಾಣ ತಗ್ಗಿಸಬಹುದೆಂದು ‘ಆತ್ಮನಿರ್ಭರ’ದ ಕಥೆಯನ್ನೂ ಹೆಣೆಯಲಾಗಿದೆ. 

ಇದು ದೇಶೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ತಳಿ ಎಂಬುದನ್ನು ಒತ್ತಿಹೇಳಲಾಗುತ್ತಿದೆಯಾದರೂ, ಇದಕ್ಕೆ ಸೇರಿಸಲಾಗಿರುವ ವಂಶವಾಹಿಯ ಹಕ್ಕುಸ್ವಾಮ್ಯ ಹೊಂದಿರುವುದು ಜರ್ಮನಿ ಮೂಲದ ಬಾಯರ್ ಅಗ್ರೋ ಸೈನ್ಸಸ್ ಎಂಬ ಬಹುರಾಷ್ಟ್ರೀಯ ಕಂಪೆನಿ ಎಂಬುದನ್ನು ಮರೆಮಾಚಲಾಗುತ್ತಿದೆ. ಇಂತಹ ತಳಿಗಳು ಬೆಳೆಗಳ ವೈವಿಧ್ಯವನ್ನೇ ನಾಶಪಡಿಸುವಂಥವು ಎಂಬುದು ಕೂಡ ಕಟು ಸತ್ಯ. ಎಲ್ಲ ವೈವಿಧ್ಯತೆಗೂ ಕೊನೆಹಾಡಲು ನಿಂತಿರುವವರಿಗೆ ರೈತನ ಹೊಲದೊಳಗೂ ಅಂಥದೇ ವಿಷ ಬಿತ್ತುವುದಕ್ಕೆ ಎಷ್ಟು ಹೊತ್ತು?

ಈ ಹಿಂದೆ ಇದೇ ಮಹಿಕೋ ಬೀಜ ಕಂಪೆನಿಯ ಬಿಟಿ ಹತ್ತಿಗೂ ಜಿಇಎಸಿ ಅನುಮತಿ ಕೊಡಲು ಮುಂದಾದಾಗ ಕರ್ನಾಟಕದ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ಅದನ್ನು ‘ವಿಚ್ ಕ್ರಾಫ್ಟ್‌ಟೆಕ್ನಾಲಜಿ’ ಎಂದು ಟೀಕಿಸಿದ್ದರು. ಅದನ್ನು ಬೆಳೆಯದಂತೆ ರೈತರಿಗೆ ಕರೆ ಕೊಟ್ಟಿದ್ದರು. 

ಆದರೆ ಆ ರಕ್ಕಸ ತಳಿಯ ಪ್ರವೇಶವನ್ನು ತಡೆಯಲಾಗಲೇ ಇಲ್ಲ. ಆನಂತರ ಬಿಟಿ ಬದನೆ ವಿಚಾರವೂ ಪ್ರಸ್ತಾವವಾಗಿತ್ತು. ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಅದಕ್ಕೆ ಅನುಮತಿ ಕೊಡುವ ವಿಚಾರದಲ್ಲಿ ಸರಕಾರ ಹಿಂದೆ ಸರಿದಿತ್ತು. ಬಿಟಿ ಸಾಸಿವೆ ವಿಚಾರ ಆರು ವರ್ಷಗಳಿಗೂ ಹಿಂದಿನದು. 

2016ರಲ್ಲಿಯೇ ಇದಕ್ಕೆ ಅನುಮತಿ ನೀಡಲು ಸರಕಾರ ಮುಂದಾಗಿತ್ತಾದರೂ, ತೀವ್ರ ವಿರೋಧದ ಬಳಿಕ ಕೈಬಿಟ್ಟಿತ್ತು. ಕಡೆಗೂ ಅದಕ್ಕೆ ನಮ್ಮ ರೈತನ ಹೊಲಗಳನ್ನು ಬಿಟ್ಟುಕೊಡಲಾಗುತ್ತಿದೆ. ‘ಉಳುವಾ ಯೋಗಿಯ ನೋಡಲ್ಲಿ’ ಎಂದು ಕವಿಯು ಹೃದಯದಿಂದ ಹಾಡುವಾಗಲೂ ಅದು ಸರಕಾರದ ಗಂಟಲಿಂದ ಹೊರಡುವಾಗಲೂ ಇರುವ ವ್ಯತ್ಯಾಸವೇ ಇದು. ಕವಿಗೆ ಅನ್ನದಾತನ ಬಗೆಗಿದ್ದ ಕಾಳಜಿ ಸರಕಾರಕ್ಕೆ ಇರಲು ಸಾಧ್ಯವಿಲ್ಲ. 

ಕಾರ್ಪೊರೇಟ್ ವಲಯದ ಹಿತಾಸಕ್ತಿಗಳನ್ನು ಒಳಗೆ ತುಂಬಿಕೊಂಡು ಅದು ಹೇಳಿದಂತೆ ಕೇಳುವ ಮತ್ತು ಅದರ ಮಾತುಗಳನ್ನೇ ಹೇಳುವ ಸರಕಾರಗಳು ರೈತನನ್ನು, ಅವನು ನಂಬಿರುವ ಈ ಮಣ್ಣು ಮತ್ತು ಇತರೆಲ್ಲ ಪ್ರಾಕೃತಿಕ ಮಿತ್ರಬಳಗವನ್ನು ಏಕಕಾಲಕ್ಕೇ ತಿಂದುಹಾಕುತ್ತವೆ. ಉಳುವ ಯೋಗಿಯ ಚಿತ್ರ ಮಸುಕು ಮಸುಕಾಗುವ, ಎಲ್ಲರೆದೆಯಿಂದ ದೂರವಾಗುವ ಅಪಾಯವು ಅತಿ ಸನಿಹದಲ್ಲಿ ಬೃಹದಾಕಾರದಲ್ಲಿ ನಿಂತಂತಿದೆ.

Similar News