ಮುನಿರತ್ನ ನನ್ನನ್ನು ಆಹ್ವಾನಿಸಿದ್ದಾರೆ ಎಂದರೆ ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಜನ ಇಲ್ಲಾಂತ ಆಯ್ತಲ್ಲ?: ಡಿಕೆಶಿ

Update: 2022-11-09 09:50 GMT

ಬೆಂಗಳೂರು: 'ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ, ಬಿಜೆಪಿಗೆ ಬಂದು ಬಿಡಿ ಎಂಬ' ಸಚಿವ ಮುನಿರತ್ನ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ''ಮುನಿರತ್ನ ಅವರು ಆಹ್ವಾನ ನೀಡಿರುವುದು ಬಹಳ ಸಂತೋಷ. ಇದರಿಂದ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಜನ ಇಲ್ಲ ಎಂಬುದು ಸಾಬೀತಾಗಿದೆ'' ಎಂದು ತಿರುಗೇಟು ನೀಡಿದ್ದಾರೆ. 

ಬುಧವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ದೇಶದ ಪ್ರಧಾನಿಗಳು ರಾಜ್ಯಕ್ಕೆ ಆಗಮಿಸುತ್ತಿರುವುದರ ಬಗ್ಗೆ ನಮ್ಮದು ಯಾವುದೇ ಆಕ್ಷೇಪ ಇಲ್ಲ. ಆದರೆ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸರ್ಕಾರಿ ಕಾಲೇಜು ಮಕ್ಕಳನ್ನು ಕರೆತರಬೇಕು ಎಂದು ಸುತ್ತೊಲೆ ಹೊರಡಿಸಿರುವುದು ಖಂಡನೀಯ'' ಎಂದರು. 

''ಬಿಜೆಪಿಯವರಿಗೆ ಇಂತಹ ದುರ್ಗತಿ ಬಂದಿದೆಯೇ? ನಿಮ್ಮ ನಾಯಕರು, ನಿಮ್ಮ ಡಬಲ್ ಇಂಜಿನ್ ಸರ್ಕಾರ  ಮೂರು ವರ್ಷದಲ್ಲಿ ಮಾಡಿರುವ ಸಾಧನೆ ತೋರಿಸಿ, ಜನರನ್ನು ಕರೆತಂದು ಕಾರ್ಯಕ್ರಮ ಮಾಡಿ. ಯಾರೂ ಬೇಡ  ಎನ್ನುವುದಿಲ್ಲ. ಆದರೆ ಮಕ್ಕಳನ್ನು ಕರೆತಂದು ಕಾರ್ಯಕ್ರಮ ಮಾಡಲು ಇದೇನು ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮವೇ? '' ಎಂದು ಪ್ರಶ್ನೆ ಮಾಡಿದರು. 

ಸತೀಶ್ ಜಾರಕಿಹೊಳಿ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯ ಅಂಶ ಪುಸ್ತಕದಲ್ಲಿ ಇದೆ ಎಂದು ಸಮರ್ಥನೆ ಮಾಡಿಕೊಂಡಿದ್ದು, ಆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಧರ್ಮ, ಸಂಸ್ಕೃತಿ ಸೇರಿದಂತೆ ಯಾವುದಕ್ಕೂ ಧಕ್ಕೆ ಆಗಬಾರದು ಎಂದು ನಾನು, ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರು ಸ್ಪಷ್ಟಪಡಿಸಿದ್ದೇವೆ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಆ ಹೇಳಿಕೆಯನ್ನು ಖಂಡಿಸುತ್ತೇವೆ. ಬಿಜೆಪಿಯವರು ಇದರಿಂದ ರಾಜಕೀಯ ಲಾಭ ಮಾಡಿಕೊಳ್ಳಲು ಏನು ಬೇಕಾದರೂ ಮಾಡಲಿ. ಪಕ್ಷದ ಅಧ್ಯಕ್ಷನಾಗಿ ಆ ಹೇಳಿಕೆ ತಪ್ಪು ಎಂದು ಹೇಳುತ್ತೇನೆ'' ಎಂದರು. 

ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ''ನನ್ನ ಖಾಸಗಿ ಬದುಕು, ವ್ಯವಹಾರ ಬೇರೆ ಇದೆ. ನಾನು ಎಲ್ಲಿಯೂ ಓಡಾಡಬಾರದೇ? ಬಾಗಲಕೋಟೆ ಜಿಲ್ಲೆಗೆ ಹೋಗಿದ್ದು ನಿಜ. ಯಾವ ಕ್ಷೇತ್ರಕ್ಕೆ ಹೋಗಿದ್ದೆ ಎಂಬುದು ಬೇಡ. ನಾನು ನನ್ನ ಖಾಸಗಿ ಕೆಲಸದ ಮೇಲೆ ಹೋಗಿದ್ದೆ'' ಎಂದರು.

ಯುವಕರಿಗೆ ಹೆಚ್ಚಿನ ಆದ್ಯತೆ ಎಂದು ಉದಯಪುರ ಶಿಬಿರದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಹಾಕುತ್ತಿದ್ದಾರೆಯೇ ಎಂದು ಕೇಳಿದಾಗ, ''ನೀವು ಕೂಡ ಅರ್ಜಿ ಹಾಕಿ. ನಿಮಗೂ ಪ್ರೋತ್ಸಾಹಿಸೋಣ'' ಎಂದರು.

Similar News