ಗುಜರಾತ್ ಚುನಾವಣೆ: ಬಿಜೆಪಿಯಿಂದ ಟಿಕೆಟ್ ನಿರಾಕರಣೆ, ಆಪ್ ಸೇರಿದ ಕೇಸರಿ ಸಿಂಹ ಸೋಲಂಕಿ

Update: 2022-11-11 06:29 GMT

ಅಹಮದಾಬಾದ್ : ಗುಜರಾತ್‌ನ ಖೇಡಾ ಜಿಲ್ಲೆಯ ಮತರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರೊಬ್ಬರು ಮುಂಬರುವ ವಿಧಾನಸಭಾ ಚುನಾವಣೆಗೆ ಆಡಳಿತ ಪಕ್ಷವು ತನಗೆ ಟಿಕೆಟ್ ನಿರಾಕರಿಸಿದ ನಂತರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾಗಿದ್ದಾರೆ.

ಮತರ್ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದ ಕೇಸರಿಸಿಂಹ ಸೋಲಂಕಿ ಅವರು ಎಎಪಿ ಸೇರಿದ್ದಾರೆ ಎಂದು ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

"ಕೇಸರಿಸಿಂಹ ಸೋಲಂಕಿ ಜಿ, ಜನಪ್ರಿಯ, ಕಠಿಣ ಪರಿಶ್ರಮಿ, ಮತಾರ್ ವಿಧಾನಸಭೆಯ ನಿರ್ಭೀತ ಶಾಸಕ, ಅರವಿಂದ ಕೇಜ್ರಿವಾಲ್ ಅವರ ಪ್ರಾಮಾಣಿಕ ರಾಜಕಾರಣದಿಂದ ಪ್ರೇರಿತರಾಗಿ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ. ನಾನು ಕೇಸರಿ ಸಿನ್ಹ್ ಜಿ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಗುಜರಾತಿನಲ್ಲಿ ಪ್ರಾಮಾಣಿಕ ಸರಕಾರ ರಚಿಸಲಿದ್ದೇವೆ'' ಎಂದು ಇಟಾಲಿಯಾ ಗುರುವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ  ಹಾಕಿರುವ ಚಿತ್ರದಲ್ಲಿ ಇಟಾಲಿಯಾ  ಅವರು ಸೋಲಂಕಿಯನ್ನು ಸ್ವಾಗತಿಸುತ್ತಿರುವುದು ಕಂಡುಬಂದಿದೆ.

ರಾಜ್ಯ ಚುನಾವಣೆಗೆ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ ಆಡಳಿತಾರೂಢ ಬಿಜೆಪಿ, 2014  ಹಾಗೂ  2017 ರಲ್ಲಿ ಸೋಲಂಕಿ ಪ್ರತಿನಿಧಿಸಿದ್ದ ಮತರ್ ಸ್ಥಾನಕ್ಕೆ ಕಲ್ಪೇಶ್ ಪರ್ಮಾರ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದೆ.

Similar News