'ಪ್ರಗತಿ ಪ್ರತಿಮೆ'ಯು ಅತ್ಯಂತ ಎತ್ತರದ ಕಂಚಿನ ಪ್ರತಿಮೆಯೆಂದು ವಿಶ್ವ ದಾಖಲೆ ಸೃಷ್ಟಿಸಿದೆ: ಸಚಿವ ಅಶ್ವತ್ಥ ನಾರಾಯಣ

Update: 2022-11-11 15:42 GMT

ಬೆಂಗಳೂರು, ನ. 11: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆಯ ಪ್ರತಿಷ್ಠಾಪನೆ ಮತ್ತು ಯಶಸ್ವಿ ಲೋಕಾರ್ಪಣೆಗೆ ಕಾರಣರಾದ ಪ್ರತಿಯೊಬ್ಬರಿಗೂ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ.ಅಶ್ವತ್ಥ ನಾರಾಯಣ (Dr. Ashwathnarayan C. N.) ಧನ್ಯವಾದಗಳನ್ನು ಅರ್ಪಿಸಿದರು.

ಶುಕ್ರವಾರ ಪ್ರಧಾನಿ ಮೋದಿ (Narendra Modi) ಅವರು ಪ್ರತಿಮೆ ಅನಾವರಣಗೊಳಿಸಿ, ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ನಿರ್ಗಮಿಸಿದ ನಂತರ ಮಾತನಾಡಿದ ಡಾ.ಅಶ್ವತ್ಥ ನಾರಾಯಣ ಅವರು, ಸಭೆಗೆ ಆಗಮಿಸಿದ್ದ ಭಾರೀ ಜನಸ್ತೋಮದ ಬಳಿಗೆ ತೆರಳಿ, ಕೃತಜ್ಞತೆ ವ್ಯಕ್ತಪಡಿಸಿದರು. ಸಾರ್ವಜನಿಕ ಸಭೆಗೆ ಅಂದಾಜು 4ಲಕ್ಷಕ್ಕೂ ಅಧಿಕ ಮಂದಿ ಜನರು ಆಗಮಿಸಿದ್ದರು. ಅತ್ಯಂತ ಉತ್ಸಾಹದಿಂದ ಬಂದಿದ್ದ ಜನರನ್ನು ಭೇಟಿಯಾದ ಅವರು, ಊಟ-ತಿಂಡಿಯ ಆತಿಥ್ಯದ ಬಗ್ಗೆ ಖುದ್ದಾಗಿ ವಿಚಾರಿಸಿದರು. ಅಲ್ಲದೆ, ಆಹಾರವನ್ನು ಸಿದ್ಧಪಡಿಸಿದ ಪಾಕಶಾಲೆ ಮತ್ತು ವಿತರಿಸಿದ ಮಳಿಗೆಗಳಿಗೆ ತೆರಳಿ, ಬಾಣಸಿಗರು ಹಾಗೂ ಅವರ ತಂಡಕ್ಕೂ ಮೆಚ್ಚುಗೆ ತಿಳಿಸಿದರು.

ಇದಲ್ಲದೆ, ಪ್ರತಿಮೆಯ ಕಾರ್ಯದಲ್ಲಿ ನಿರತರಾಗಿದ್ದ ಮತ್ತು ಸಾರ್ವಜನಿಕ ಸಭೆಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದವರಿಗೂ ಸಚಿವರು ತಮ್ಮ ವಂದನೆಗಳನ್ನು ಸಲ್ಲಿಸಿ, ಇಡೀ ಕಾರ್ಯಕ್ರಮ ಸುಸೂತ್ರವಾಗಿ ನಡೆದಿದ್ದರಲ್ಲಿ ಪ್ರತಿಯೊಬ್ಬರ ಪಾತ್ರ ಮತ್ತು ಸಹಕಾರವಿದೆ. ಎರಡು ವರ್ಷದಿಂದ ನಾನು ಈ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಪ್ರತಿಮೆಯ ಲೋಕಾರ್ಪಣೆಯೊಂದಿಗೆ ಇದು ಸಂಪನ್ನಗೊಂಡಿದ್ದು, ನನ್ನಲ್ಲಿ ಧನ್ಯತೆಯ ಭಾವನೆ ಮೂಡಿಸಿದೆ ಎಂದರು.

ಇದನ್ನೂ ಓದಿ>>> ವಂದೇ ಭಾರತ್ ಎಕ್ಸ್ ಪ್ರೆಸ್ | ಬೆಂಗಳೂರು-ಮೈಸೂರು ಪ್ರಯಾಣ ದರ ಎಷ್ಟು? ಇಲ್ಲಿದೆ ವಿವರ

ನನ್ನ ಮೇಲೆ ವಿಶ್ವಾಸ ಇಟ್ಟು ಹೊಣೆ ನೀಡಿದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾರ್ಗದರ್ಶನ ನೀಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಎಲ್ಲರನ್ನೂ ನೆನೆಯುತ್ತೇನೆ. ಈ ಪ್ರತಿಮೆಯು ಅತ್ಯಂತ ಎತ್ತರದ ಕಂಚಿನ ಪ್ರತಿಮೆಯೆಂದು ವಿಶ್ವ ದಾಖಲೆ ಸೃಷ್ಟಿಸಿದೆ. ಬೆಂಗಳೂರಿನ ಪಾಲಿಗೆ ಇದು ಮುಂದಿನ ದಿನಗಳಲ್ಲಿ ಹೆಗ್ಗುರುತಾಗಿ, ಜನರನ್ನು ಆಕರ್ಷಿಸಲಿದೆ. ಬೆಂಗಳೂರಿನ ಯಶೋಗಾಥೆಯು ಈ ಪ್ರತಿಮೆಯ ಜತೆ ಅನ್ಯೋನ್ಯ ವಾಗಿ ಛಾಪು ಮೂಡಿಸಲಿದೆ ಎಂದು ಅವರು ಬಣ್ಣಿಸಿದರು.

ಮೈಸೂರಿನಿಂದ ತರಿಸಿದ ಕೆಂಪೇಗೌಡ ಪೇಟ:

ಪ್ರಧಾನಿ ಮೋದಿ ಅವರಿಗೆ ಇಂದು ತೊಡಿಸಿದ ಕೆಂಪೇಗೌಡ ಪೇಟೆಯನ್ನು ಸಚಿವ ಅಶ್ವತ್ಥನಾರಾಯಣ ಅವರು ಮೈಸೂರಿನಿಂದ ವಿಶೇಷವಾಗಿ ಮಾಡಿಸಿ ತರಿಸಿದ್ದರು. ಅದನ್ನು ನೋಡಿ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಕುರಿತ ಮಾಹಿತಿಯನ್ನು ನಿರ್ಮಲಾನಂದನಾಥ ಸ್ವಾಮೀಜಿ ಪ್ರಧಾನಿಯವರಿಗೂ ನೀಡಿದರು.

Similar News