ನ್ಯಾ. ಚಂದ್ರಚೂಡ್ ಅವರ ಮೇಲಿರುವ ನಿರೀಕ್ಷೆ

Update: 2022-11-12 04:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ನ್ಯಾ. ಚಂದ್ರಚೂಡ್ ಅವರು ಭಾರತದ 50ನೇ ಮುಖ್ಯ ನ್ಯಾಯಾಧೀಶರಾಗಿ ನವೆಂಬರ್ 9ರಂದು ಅಧಿಕಾರ ವಹಿಸಿಕೊಂಡಿದ್ದಾರೆ ಮತ್ತು ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತಾ ಎಲ್ಲಾ ನಾಗರಿಕರ ಸೇವೆ ಮಾಡುವುದಾಗಿ ಹೇಳಿದ್ದಾರೆ. ಅವರು ಮುಖ್ಯ ನ್ಯಾಯಾಧೀಶರಾಗಿ ನಾಮಾಂಕಿತವಾಗುತ್ತಿದ್ದಂತೆ ಮುಂಬೈ ಮೂಲದ ವಕೀಲರೊಬ್ಬರು ಅವರನ್ನು ಹುದ್ದೆಗೆ ಅನರ್ಹರೆಂದು ಘೋಷಿಸಬೇಕೆಂದು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು ಹಾಗೂ ಕೇಂದ್ರ ಕಾನೂನು ಮಂತ್ರಿ ರಿಜಿಜು ಅವರು ‘‘ನ್ಯಾಯಾಂಗವು ಪಾರದರ್ಶಕವಾಗಿಲ್ಲ, ಅಲ್ಲಿರುವಷ್ಟು ರಾಜಕೀಯ ಎಲ್ಲೂ ಇಲ್ಲ’’ ಎಂದು ಹೇಳಿಕೆ ನೀಡಿದ್ದರು. 

ಈ ಹಿಂದೆ ಬಿಜೆಪಿಯವರ ನೀತಿಗಳಿಗೆ ತಕ್ಕಂತೆ ಆದೇಶವನ್ನು ನೀಡಿದ ಆರೋಪ ಹೊತ್ತಿರುವ ನಿವೃತ್ತ ನ್ಯಾಯಮೂರ್ತಿ ಗೊಗೊಯ್, ದೀಪಕ್ ಮಿಶ್ರಾ, ಬೋಬ್ಡೆ ಅವರ ಅವಧಿಯಲ್ಲಿ ಯಾವತ್ತೂ ಈ ಬಗೆಯ ಟೀಕೆಗಳನ್ನು ಮಾಡದ ಮೋದಿ ಸರಕಾರ ನ್ಯಾ. ಚಂದ್ರಚೂಡರು ಅಧಿಕಾರ ವಹಿಸಿಕೊಳ್ಳುವ ಹೊತ್ತಿನಲ್ಲಿ ಎತ್ತಿದ ಅಪಸ್ವರ ನ್ಯಾ. ಚಂದ್ರಚೂಡರ ಹಾದಿಗೆ ಆಳುವ ಸರಕಾರ ಎಷ್ಟು ಅಡ್ಡಗಾಲು ಹಾಕಬಹುದು ಎಂಬುದಕ್ಕೆ ಸೂಚನೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. 

ಕಳೆದ ಒಂದು ದಶಕದಲ್ಲಿ ಅತಿ ದೀರ್ಘ ಕಾಲದ - ಎರಡು ವರ್ಷಗಳ ಅವಧಿಗೆ (2024ರ ನವೆಂಬರ್ ತನಕ) ಮುಖ್ಯ ನ್ಯಾಯಾಧೀಶರಾಗುವ ಅವಕಾಶ ನ್ಯಾ. ಚಂದ್ರಚೂಡ್ ಅವರಿಗೆ ಒದಗಿ ಬಂದಿದೆ. ಅವರ ತಂದೆಯವರೂ (ವೈ.ವಿ. ಚಂದ್ರಚೂಡ್) ಸಹ ಅತಿ ದೀರ್ಘ ಕಾಲ (ಏಳು ವರ್ಷ-1978-85) ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದರು. ಈ ಹಿರಿಯ ಚಂದ್ರಚೂಡ್ ಅವರು ತುರ್ತು ಪರಿಸ್ಥಿತಿಯ ಕಾಲದಲ್ಲಿ ನ್ಯಾಯ ಸಂಹಿತೆ ಗಳನ್ನು ಮೀರಿ ಇಂದಿರಾಗಾಂಧಿಯವರಿಗೆ ಅನುಕೂಲಕರವಾದ ತೀರ್ಪುಗಳನ್ನು ಕೊಟ್ಟಿದ್ದರು ಎಂಬ ಟೀಕೆಯನ್ನು ಎದುರಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರಕಾರವು ನಾಗರಿಕರ ಮೂಲಭೂತ ಹಕ್ಕುಗಳನ್ನೂ ಖೈದುಗೊಳಿಸಬಹುದೆಂಬ ಆದೇಶವನ್ನು ನೀಡಿದ ಬಹುಮತದ ಆದೇಶದ ರೂವಾರಿಯಾಗಿದ್ದರು. 

ನ್ಯಾ. ಎಚ್.ಆರ್. ಖನ್ನಾ ಅವರು ಮಾತ್ರ ಅದನ್ನು ವಿರೋಧಿಸಿದ್ದರು ಮತ್ತು ಅದಕ್ಕಾಗಿ ಸೇವಾ ಹಿರಿತನವಿದ್ದರೂ ಮುಖ್ಯ ನ್ಯಾಯಾಧೀಶರಾಗುವ ಅವಕಾಶವನ್ನು ಸರಕಾರ ಅವರಿಗೆ ಆಗ ನಿರಾಕರಿಸಿತ್ತು. 
ಆದರೆ ತಮ್ಮ ಒಂದು ತೀರ್ಪಿನಲ್ಲಿ ನ್ಯಾ. ಡಿ.ವೈ. ಚಂದ್ರಚೂಡ್ ಅವರು ತಮ್ಮ ತಂದೆಯ ಆದೇಶವನ್ನು ತಪ್ಪೆಂದು ತೀರ್ಪುಕೊಟ್ಟಿದ್ದು ನಾಗರಿಕರಲ್ಲಿ ಅವರ ಬಗ್ಗೆ ವಿಶ್ವಾಸವನ್ನು ಹೆಚ್ಚಿಸಿತ್ತು. ಇದಲ್ಲದೆ ಇಂತಹ ಹಲವಾರು ಸಂವಿಧಾನಪರ ಆದೇಶಗಳನ್ನು ಕೊಟ್ಟು ಹಲವಾರು ಬಾರಿ ನಾಗರಿಕರ ಹಕ್ಕುಗಳನ್ನು ರಕ್ಷಿಸಿರುವ ಚಂದ್ರಚೂಡ್ ದೇಶದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. 
ಭಾರತವು ಇಂದು ಒಂದು ಫ್ಯಾಶಿಸ್ಟ್ ಸರ್ವಾಧಿಕಾರದ ಬೆದರಿಕೆಯನ್ನು ಎದುರಿಸುತ್ತಿದೆ. ಶಾಸಕಾಂಗ ಹಾಗೂ ಕಾರ್ಯಾಂಗದಿಂದ ವಂಚಿತರಾಗಿರುವ ಜನ ನ್ಯಾಯಾಂಗದ ಕಡೆಗೆ ಅದರಲ್ಲೂ ಸುಪ್ರೀಂ ಕೋರ್ಟಿನ ಕಡೆಗೆ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಹಲವಾರು ಸರ್ವೇಗಳಲ್ಲಿ ಭಾರತದ ಜನರಿಗೆ ಭಾರತದ ಸಂಸತ್ತಿಗಿಂತ ಭಾರತದ ಸುಪ್ರೀಂ ಕೋರ್ಟ್ ಹಾಗೂ ಸೇನೆಯ ಮೇಲೆಯೇ ವಿಶ್ವಾಸ ಹೆಚ್ಚೆಂದು ಕಂಡುಬಂದಿದೆ. 

ಇದು ಒಂದು ಪ್ರಜಾತಂತ್ರಕ್ಕೆ ತಕ್ಕುದಲ್ಲವಾದರೂ ಇದೇ ಸದ್ಯದ ವಾಸ್ತವವಾಗಿದೆ. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ನ್ಯಾಯಾಂಗವೂ ಸಹ ಕಾರ್ಯಾಂಗಕ್ಕೆ ಅಡಿಯಾಗಿಯಲ್ಲವಾದರೂ ಪೂರಕವಾಗಿ ನಡೆದುಕೊಳ್ಳುತ್ತಾ ಬಂದಿರುವುದರಿಂದ ಜನರಿಗೆ ನಿಧಾನವಾಗಿ ನ್ಯಾಯಾಂಗದ ಬಗ್ಗೆಯೂ ನಂಬಿಕೆ ಮಾಯವಾಗುವ ಹಂತಕ್ಕೆ ಬಂದಿದೆ. 
ಇಂತಹ ಸಂದರ್ಭದಲ್ಲಿ ತಮ್ಮ ಅಪಾರ ವಿದ್ವತ್ತು ಹಾಗೂ ನೀಡಿರುವ ಹಲವಾರು ಜನಪರ ನ್ಯಾಯಾದೇಶಗಳು ನ್ಯಾ. ಡಿ.ವೈ. ಚಂದ್ರಚೂಡ್ ಅವರು ದೇಶದ ಮುಖ್ಯ ನ್ಯಾಯಾಧೀಶರಾಗಿರುವುದು ಸಹಜವಾಗಿಯೇ ಜನರಿಗೆ ನಿರಾಳ ಉಂಟುಮಾಡಿದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಜನರ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕೆಂದು ವಿಸ್ತರಿಸಿದ ಒಂಭತ್ತು ಜನರ ಪೀಠದಲ್ಲಿ ಚಂದ್ರಚೂಡ್ ಕೂಡ ಒಬ್ಬರಾಗಿದ್ದರು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಅಲ್ಪಸಂಖ್ಯಾತ ತೀರ್ಪು ಕೊಟ್ಟಿದ್ದರು, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿದಿದ್ದರು. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಆರೋಪಿಯ ಜಾಮೀನು ಹಕ್ಕಿನ ಪರವಾಗಿಯೂ ಹಲವಾರು ಮಹತ್ವದ ಆದೇಶಗಳನ್ನು ಕೊಟ್ಟಿದ್ದರು. 

ಕೇರಳದ ಹಿಂದೂ ತರುಣಿ ಸ್ವಇಚ್ಛೆಯಿಂದ ಇಸ್ಲಾಮಿಗೆ ಮತಾಂತರಗೊಂಡು ಮುಸ್ಲಿಮ್ ಯುವಕನನ್ನು ಮದುವೆಯಾದ ಪ್ರಖ್ಯಾತ ಹಾದಿಯಾ ಪ್ರಕರಣದಲ್ಲಿ ‘‘ವಯಸ್ಕ ತರುಣ-ತರುಣಿಯರು ಸಮ್ಮತಿ ಪೂರ್ವಕವಾಗಿ ವೈವಾಹಿಕ ಸಂಬಂಧಕ್ಕೆ ಮುಂದಾದಾಗ ಕುಟುಂಬ, ಪ್ರಭುತ್ವ ಮತ್ತು ಸಮಾಜ ಮಧ್ಯಪ್ರವೇಶ ಮಾಡುವ ಹಾಗಿಲ್ಲ’’ ಎಂಬ ಮಹತ್ವದ ತೀರ್ಪು ಕೊಟ್ಟಿದ್ದರು. ಅದೇ ರೀತಿ ಅವಿವಾಹಿತ ಮಹಿಳೆಯ ಗರ್ಭಪಾತದ ಹಕ್ಕನ್ನು ಎತ್ತಿಹಿಡಿದಿದ್ದರು ಹಾಗೂ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸುವುದು ಧಾರ್ಮಿಕ ಸ್ವಾತಂತ್ರ‍್ಯದ ವ್ಯಾಪ್ತಿಗೆ ಬರದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ತೀರ್ಪು ಕೊಟ್ಟ ಪೀಠದ ಬಹುಸಂಖ್ಯಾತ ತೀರ್ಪನ್ನು ಬರೆದಿದ್ದರು. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತಾಗುವಲ್ಲಿ ನ್ಯಾ. ಚಂದ್ರಚೂಡ್ ಅವರ ಪೀಠ ಮಧ್ಯ ಪ್ರವೇಶ ಮಾಡಿದ್ದೇ ಕಾರಣವಾಗಿತ್ತು.
ಆದರೆ ಅಯೋಧ್ಯಾ ತೀರ್ಪು, ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗವಿತ್ತೇ ಎಂಬ ಅಧ್ಯಯನಕ್ಕೆ ಅವಕಾಶ ನೀಡಿರುವುದು ಮತ್ತು ಈಗ ಅದಕ್ಕಾಗಿ ಪ್ರತ್ಯೇಕ ಪೀಠ ರಚಿಸಿರುವುದು, ಜಸ್ಟಿಸ್ ಲೋಯಾ ಪ್ರಕರಣದಲ್ಲಿ ಸ್ವತಂತ್ರ ತನಿಖೆ ನಿರಾಕರಿಸುವುದು- ಇನ್ನಿತ್ಯಾದಿ ಆದೇಶಗಳನ್ನು ನ್ಯಾ. ಚಂದ್ರಚೂಡ್ ನೀಡಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

 ಹೀಗಾಗಿ ನ್ಯಾ. ಚಂದ್ರಚೂಡ್ ಅವರ ನ್ಯಾಯ ಪರತೆ ಮತ್ತು ವಿದ್ವತ್ತು ಮೋದಿ ಸರಕಾರಕ್ಕೆ ಮುನಿಸು ಉಂಟಾಗದ ವಿಷಯಗಳಲ್ಲಿ ಮಾತ್ರ ವ್ಯಕ್ತವಾಗುತ್ತದೆ ಎಂಬ ವಿಮರ್ಶೆಯೂ ಇದೆ. ಅದೇನೇ ಇರಲಿ. 2022-24ರ ನಡುವಿನ ಅವಧಿಯಲ್ಲೇ ದೇಶದಲ್ಲಿ ಹಲವಾರು ಶಾಸನ ಸಭಾ ಚುನಾವಣೆಗಳು ಮತ್ತು 2024ರಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿವೆ. ಈ ಅವಧಿಯಲ್ಲಿ ನ್ಯಾ. ಚಂದ್ರಚೂಡ್ ಮುಖ್ಯ ನ್ಯಾಯಾಧೀಶರಾಗಿದ್ದಾರೆ. ಈ ಚುನಾವಣೆ ಹಿಂದುತ್ವ ರಾಜಕಾರಣಕ್ಕೆ, ಸಂಘಪರಿವಾರ-ಮೋದಿ ಸರಕಾರಕ್ಕೆ ಅತ್ಯಂತ ಮುಖ್ಯವಾದುದು. ಈಗಾಗಲೇ ಮೋದಿ ಸರಕಾರ ತನ್ನ ಹಿಂದುತ್ವದ ಮತ್ತು ಸರ್ವಾಧಿಕಾರಿ ಅಜೆಂಡಾಗಳನ್ನು ಸಂವಿಧಾನದಡಿಯಲ್ಲೇ ಜಾರಿಗೆ ತರುತ್ತಿವೆ. 
ಪೆಗಾಸಸ್ ಗೂಢಚರ್ಯೆ, CAA-NPR/NRC, ಚುನಾವಣಾ ಬಾಂಡ್ ಎಂಬ ಮೋದಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಯೋಜನೆ, ಕಾಶ್ಮೀರ ವಿಭಜನೆ ಮತ್ತು ಆರ್ಟಿಕಲ್ 370ರದ್ದು, ಭೀಮಾ ಕೋರೆಗಾಂವ್ ಇನ್ನಿತರ ದುರುದ್ದೇಶ ಪ್ರಕರಣಗಳಲ್ಲಿ ಬಂಧಿತರ ಜಾಮೀನು ಪ್ರಕರಣ-ಇವುಗಳೆಲ್ಲವೂ ಈ ಚುನಾವಣಾ ವರ್ಷಗಳಲ್ಲೇ ನ್ಯಾ. ಚಂದ್ರಚೂಡ್ ಎದುರಿಗೆ ಬರಲಿದೆ. ಹಾಗೆಯೇ EWS ಮತ್ತು ಹಿಜಾಬ್, ಒಳಮೀಸಲಾತಿ ಪ್ರಕರಣಗಳೂ ಬಾಕಿ ಇವೆ. ಈ ಎಲ್ಲಾ ವಿಷಯಗಳಲ್ಲಿ ಸಂವಿಧಾನ ಮತ್ತು ನ್ಯಾಯವನ್ನು ಉಳಿಸುವ ಗುರುತರ ಜವಾಬ್ದಾರಿ ಮುಖ್ಯ ನ್ಯಾಯಾಧೀಶರಾದ ನ್ಯಾ. ಚಂದ್ರಚೂಡ್ ಅವರ ಮೇಲಿರುತ್ತದೆ. 2024 ರಲ್ಲಿ ನ್ಯಾ. ಚಂದ್ರಚೂಡ್ ನಿವೃತ್ತರಾಗುವಾಗ ಈ ಎಲ್ಲಾ ಜವಾಬ್ದಾರಿಯನ್ನು ಅವರು ಅತ್ಯುತ್ತಮವಾಗಿ ನಿಭಾಯಿಸಿದರು ಎಂದು ಬರೆಯುವಂತಾದರೆ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ ಎಂದಾಗುತ್ತದೆ.

Similar News