ಮಂಡ್ಯ: ನಾಲೆಗೆ ಬಿದ್ದು ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಮೃತ್ಯು

Update: 2022-11-13 09:03 GMT

ಮಂಡ್ಯ, ನ.13: ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ ಪಾಂಡಿಚೆರಿ ಮೂಲದ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್  ಕ್ರೀಡಾಪಟು (Cyclist) ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಬಳಿ ಶನಿವಾರ ಬೆಳಗ್ಗೆ ನಡೆದಿದ್ದು, ರವಿವಾರ ಮುಂಜಾನೆ ಮೃತದೇಹ ಪತ್ತೆಯಾಗಿದೆ.

ಪಾಂಡಿಚೆರಿ ಮೂಲದ ಆಲ್ಹರ್ಶ್ (17) ಮೃತ ಕ್ರೀಡಾಪಟು. ವಾಸು ಎಂಬ ವ್ಯಕ್ತಿ ನೇತೃತ್ವದಲ್ಲಿ ಅಕ್ಕಿಹೆಬ್ಬಾಳುವಿನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೈಕಲ್ ಪೋಲೋ ಕ್ರೀಡಾಕೂಟದ ಸ್ಪರ್ಧೆಗೆ ಈ ಕ್ರೀಡಾಪಟು ಆಗಮಿಸಿದ್ದ ಎನ್ನಲಾಗಿದೆ. 

ಕ್ರೀಡಾಕೂಟದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಇರುವ ನಾಲೆಗೆ ಮೃತ ಕ್ರೀಡಾಪಟು ಆಲ್ಹರ್ಶ್, ಮತ್ತೊಬ್ಬ ಕ್ರೀಡಾಪಟು ಜತೆ ಬಹಿರ್ದೆಸೆಗೆ  ತೆರಳಿದ ವೇಳೆ  ಕಾಲು ಜಾರಿ ನಾಲೆಗೆ ಬಿದ್ದು ಕೊಚ್ಚಿ ಹೋದ ಎಂದು ತಿಳಿದು ಬಂದಿದೆ.

ಅಗ್ನಿಶಾಮಕದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ರವಿವಾರ ಮುಂಜಾನೆ ಹೊರತೆಗೆದಿದ್ದಾರೆ. ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಯ ಸವಗಾರದಲ್ಲಿ ಶವವನ್ನು ಇರಿಸಲಾಗಿದೆ.

ಕ್ರೀಡಾಕೂಟದ ಆಯೋಜನೆಯ ಬಗ್ಗೆ ಹಲವಾರು ಗೊಂದಲಗಳಿವೆ. ಈ ಕ್ರೀಡಾಕೂಟವನ್ನು ಬಿಜೆಪಿ ನೇತೃತ್ವದಲ್ಲಿ ವಾಸು ಎಂಬಾತ ಏರ್ಪಡಿಸಿದ್ದ ಎಂದು ತಿಳಿದು ಬಂದಿದೆ. 

ಕ್ರೀಡಾಕೂಟಕ್ಕೆ ಸುಮಾರು 7 ರಾಜ್ಯಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ಸರಿಯಾದ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಲ್ಲದ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ಊರ ಹೊರೆಗಿನ ನಾಲೆಯ ಬಳಿ ಬಹಿರ್ದೆಸೆಗೆ ತೆರಳಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಸಂಬಂಧ ಕೆ.ಆರ್. ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Similar News