ಮಡಿಕೇರಿ | ಅಪಾಯವನ್ನು ಆಹ್ವಾನಿಸುತ್ತಿರುವ ಕತ್ತಲೆಕಾಡು ರಸ್ತೆ: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರ ಅಸಮಾಧಾನ

Update: 2022-11-13 09:12 GMT

ಮಡಿಕೇರಿ: ಕಡಿದಾದ ಕತ್ತಲೆಕಾಡು ರಸ್ತೆ ಅಪಾಯವನ್ನು ಆಹ್ವಾನಿಸುತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ಕಡೆಯಿಂದ ಕಡಗದಾಳು, ಕತ್ತಲೆಕಾಡು, ಅಬ್ಯಾಲ ಮಾರ್ಗವಾಗಿ ಸಿದ್ದಾಪುರಕ್ಕೆ ತೆರಳುವ ಮುಖ್ಯ ರಸ್ತೆ ಕಳೆದ ಹಲವು ವರ್ಷಗಳಿಂದ ನಿರ್ಲಕ್ಷಿಸಲ್ಪಟ್ಟಿದೆ. ಪ್ರಕೃತಿ ಸೌಂದರ್ಯದಿಂದ ಕೂಡಿರುವ ಈ ರಸ್ತೆಯಲ್ಲಿ ಸಾಗುವಾಗ ಪ್ರವಾಸಿಗರನ್ನು ಕೈಬೀಸಿ ಕರೆಯುವ ಹಲವು ಚಿಕ್ಕ ಪುಟ್ಟ ಜಲಪಾತಗಳಿವೆ. ಕತ್ತಲೆಕಾಡು ರಸ್ತೆ ಚೆಟ್ಟಳ್ಳಿ ಮಾರ್ಗವಾಗಿ ಸಿದ್ದಾಪುರವನ್ನು ಬೆಸೆಯುವ ಮುಖ್ಯ ರಸ್ತೆಯಾಗಿದೆ. ಪ್ರತಿದಿನ ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇಲ್ಲಿದೆ ಎಂದು ಆರೋಪಿಸಿದ್ದಾರೆ.

ಹೊಂಡ, ಗುಂಡಿಗಳಲ್ಲಿ ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಚಾಲಕರು ನಿತ್ಯ ನಷ್ಟ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ವಾಹನ ಚಾಲನೆ ಸರ್ಕಸ್ ನಂತ್ತಾಗಿದ್ದು, ಬೈಕ್ ಚಾಲಕರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಅದೆಷ್ಟೋ ವಾಹನಗಳು ಗುಂಡಿಗಳಲ್ಲಿ ಸಿಲುಕಿಕೊಂಡು ವರ್ಕ್ ಶಾಪ್ ಸೇರಿದ ಉದಾಹರಣೆಗಳಿವೆ. ಕತ್ತಲೆಕಾಡಿನಿಂದ ಅಬ್ಯಾಲ ಮಾರ್ಗವಾಗಿ ಸಾಗುವ ರಸ್ತೆ ಬಹಳ ಕಿರಿದಾಗಿದ್ದು, ಅಪಾಯದಿಂದ ಕೂಡಿದೆ.

ಎದುರಿನಿಂದ ವಾಹನ ಬರುವ ವಾಹನಗಳಿಗೆ ಸ್ಥಳ ನೀಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಚಾಲಕನ ನಿಯಂತ್ರಣ ತಪ್ಪಿದರೆ ವಾಹನ ಪ್ರಪಾತಕ್ಕೆ ಬೀಳುವ ಅಪಾಯಕಾರಿ ಸ್ಥಿತಿ ಇಲ್ಲಿದೆ. ಹಗಲಿನಲ್ಲಿ ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡುವುದೇ ದೊಡ್ಡ ಸಾಹಸ ಎಂದು ಚಾಲಕರು ಬೇಸರ ವ್ಯಕ್ತಪಡಿಸುತ್ತಾರೆ.

ರಾತ್ರಿ ವೇಳೆ ಸದಾ ಮಂಜಿನ ವಾತಾವರಣವಿರುವುದರಿಂದ ಗುಂಡಿಬಿದ್ದ ರಸ್ತೆಯಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹಲವು ವರ್ಷಗಳಿಂದ ಪಾಳುಬಿದ್ದಿರುವ ಈ ರಸ್ತೆಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಪ್ರಶ್ನಿಸಿರುವ ಸಾರ್ವಜನಿಕರು, ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳಪೆ ಕಾಮಗಾರಿಯಿಂದ ಕೂಡಿದ ತೇಪೆಯಿಂದ ಸಾರ್ವಜನಿಕರ ಹಣ ನೀರುಪಾಲಾಗುತ್ತಿದೆಯೇ ಹೊರತು ಶಾಶ್ವತ ಪರಿಹಾರ ದೊರೆಯುತ್ತಿಲ್ಲ. ತೇಪೆ ಹಾಕಿ ಕಣ್ಣೊರೆಸುವ ತಂತ್ರ ಅನುಸರಿಸುವ ಬದಲು ಸರ್ವಋತು ರಸ್ತೆ ನಿರ್ಮಾಣದ ವೈಜ್ಞಾನಿಕ ಯೋಜನೆಯನ್ನು ಸಾಕಾರಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

Similar News