'ಕೆಂಪೇಗೌಡರ ಪ್ರತಿಮೆ ಅನಾವರಣ' ಕೇಶವಕೃಪದ ಕಾರ್ಯಕ್ರಮ ಅಲ್ಲ: ಬಿಜೆಪಿ ವಿರುದ್ಧ ಜೆಡಿಎಸ್ ಕಿಡಿ

'ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕೇ ಹೊರತು ಬಿಜೆಪಿ ಅಲ್ಲ'

Update: 2022-11-13 09:55 GMT

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಮೆ ಅನಾವರಣ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಬಿಜೆಪಿ ಸರಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ಮುಂದುವರಿಸಿದೆ.

ಈ ಬಗ್ಗೆ ಪಕ್ಷವು ಆಕ್ಷೇಪ ವ್ಯಕ್ತಪಡಿಸಿದ ನಂತರ, ಅದನ್ನು ತಿರುಚಿ ಹೇಳುತ್ತಿರುವ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮತ್ತಿತರ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಬಿಜೆಪಿ ಬದಲು ಮುಖ್ಯಮಂತ್ರಿ ಇಲ್ಲವೇ ಸರಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕು ಎಂದು ಪಕ್ಷ ಒತ್ತಾಯ ಮಾಡಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಕ್ಷವು ಬಿಜೆಪಿಯನ್ನು ಸುಳ್ ಬಿಜೆಪಿ, ಗೊಬೆಲ್ ಬಿಜೆಪಿ ಹಾಗೂ ಮುಖ್ಯಮಂತ್ರಿಗಳನ್ನು ಸುಳ್ ಸಿಎಂ ಎಂದು ಕರೆದು ಅವನ್ನೆ ಹ್ಯಾಷ್ ಟ್ಯಾಗ್ ಮಾಡಿದೆ. ಅಲ್ಲದೆ, ಅಡಾಲ್ಫ್ ಹಿಟ್ಲರ್ ಸಂಪುಟದಲ್ಲಿ ಇದ್ದ ಮಂತ್ರಿ ಗೊಬೆಲ್ ಗೆ ಬಿಜೆಪಿಯನ್ನು  ಹೋಲಿಸಿ ಜೆಡಿಎಸ್ ತಿರುಗೇಟು ನೀಡಿದೆ.

ಕೇಶವ ಕೃಪದ ಕಾರ್ಯಕ್ರಮ ಅಲ್ಲ:

ನಾಡಪ್ರಭುಗಳ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸದೆ ರಾಜ್ಯ ಬಿಜೆಪಿ ಸರಕಾರ ಶಿಷ್ಟಾಚಾರ ಲೋಪ ಎಸಗಿದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕೇ ಹೊರತು ಬಿಜೆಪಿ ಅಲ್ಲ. ಇಷ್ಟಕ್ಕೂ ಅದು ಕೇಶವ ಕೃಪದ ಕಾರ್ಯಕ್ರಮವಲ್ಲ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

'ಬೂಟಾಟಿಕೆ ದಾಸಯ್ಯನಿಗೆ ಮೈಯಲ್ಲಾ ಪಂಗನಾಮʼ ಎನ್ನುವಂತಿದೆ ಬಿಜೆಪಿ ಪರಿಸ್ಥಿತಿ. ಕೊಳಕು, ವಿಕೃತಿಗಳ ಮಹಾಸಂಗಮವೇ ಬಿಜೆಪಿ. ರಕ್ತಪೀಪಾಸುತನ, ನರಹಂತಕ ಮನಃಸ್ಥಿತಿಯೇ ಬಿಜೆಪಿಯ ನೈಜಮುಖ. ಆಪರೇಷನ್‌ ಕಮಲವೇ ಅದರ ಶಿಷ್ಟಾಚಾರ, ಸುಳ್ಳಿನ ಪ್ರಚಾರವೇ ಅದರ ಸಂಸ್ಕಾರ ಎಂದು ಕಮಲ ಪಕ್ಷಕ್ಕೆ ಟಾಂಗ್ ನೀಡಿದೆ.

ಎಚ್.ಡಿ.ದೇವೇಗೌಡರನ್ನು ಜೆಡಿಎಸ್ ಎಂದಿಗೂ ಜಾತಿ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಆದರೆ, ನರೇಂದ್ರ ಮೋದಿ ಅವರ ಅರ್ಧದಿನದ ʼಕರ್ನಾಟಕದ ಕಾಟಾಚಾರದ ಭೇಟಿʼ ಏನನ್ನು ಗುರಿ ಮಾಡಿಕೊಂಡಿತ್ತು? ಎನ್ನುವುದನ್ನು ಮಾಧ್ಯಮಗಳೇ ನಿರಂತರವಾಗಿ ವರದಿ ಮಾಡುತ್ತಿರುವುದು ಕಾಣುತ್ತಿಲ್ಲವೇ? ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ ಎಂದು ಜೆಡಿಎಸ್ ಲೇವಡಿ ಮಾಡಿದೆ.

ಮಾಜಿ ಪ್ರಧಾನಿಯನ್ನು ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಪ್ರಶ್ನೆ ಮಾಡಿದ್ದನ್ನೇ ʼಮಹಾ ಅಪರಾಧʼ ಎಂದು ಚಿತ್ರಿಸುತ್ತಿರುವ ಬಿಜೆಪಿಯ ವಿಕೃತಿ ಆದಿಯಿಂದಲೂ ಧರ್ಮ, ಜಾತಿ ಮತ್ತು ಸುಳ್ಳಿನ ಸುತ್ತಲೇ ಗಿರಕಿ ಹೊಡೆಯುತ್ತಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ಸತ್ಯವನ್ನು ಮಿಥ್ಯೆ ಎನ್ನಲಾದಿತೆ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಸ್ತಿತ್ವದ ಭಯ ಎನ್ನುವುದು ಹಾಗಿರಲಿ, ಪ್ರಧಾನಿಯ ನಾಮಬಲ ಒಂದಿಲ್ಲದಿದ್ದರೆ ನಿಮಗೆ ಠೇವಣಿಗೂ ಖಾತರಿ ಇಲ್ಲ. ಇನ್ನು 6 ತಿಂಗಳಲ್ಲಿ ಮೋದಿ ಅವರು ಎಷ್ಟು ಸಲ ಕರ್ನಾಟಕಕ್ಕೆ ಓಡೋಡಿ ಬರುತ್ತಾರೋ ನೋಡೋಣ. ಅಲ್ಲಿ ನಿಮ್ಮ ಯೋಗ್ಯತೆಯ ಅಳತೆ ಎಷ್ಟು? ಎಂಬುದು ಗೊತ್ತಾಗುತ್ತದೆ ಎಂದು ಜೆಡಿಎಸ್ ಹೇಳಿದೆ.

ಬಿಜೆಪಿಯ ಒಕ್ಕಲಿಗ ನಾಯಕರು ಮುನ್ನೆಲೆಗೆ ಬರುವುದನ್ನು ಕುಮಾರಸ್ವಾಮಿ ಅವರು ಸಹಿಸುತ್ತಿಲ್ಲ ಎನ್ನುತ್ತಿದೆ ಬಿಜೆಪಿ!! ʼಭೂತದ ಬಾಯಲ್ಲಿ ಭಗದ್ಗೀತೆʼ ಎಂದರೆ ಇದೇ. ಧರ್ಮ, ಜಾತಿ, ಆಚಾರ, ವಿಚಾರ, ಆಹಾರದ ವಿಷಯದಲ್ಲೇ ವಿಷ-ವಿಕೃತಿಗಳನ್ನು ಬಿತ್ತಿದ ಬಿಜೆಪಿ, ಈಗ ಸಹಿಷ್ಣುತೆಯ ಬಗ್ಗೆ ಪಾಠ ಬಿಗಿಯುತ್ತಿದೆ!! ಎಂದು ಜೆಡಿಎಸ್ ಪಕ್ಷವು ಜೆಡಿಎಸ್ ಗೆ ಚುರುಕು ಮುಟ್ಟಿಸಿದೆ.

ಭೂತದ ಬಾಯಲ್ಲಿ ಭಗದ್ಗೀತೆ:

ಬಿಜೆಪಿಯ ಒಕ್ಕಲಿಗ ನಾಯಕರು ಮುನ್ನೆಲೆಗೆ ಬರುವುದನ್ನು ಕುಮಾರಸ್ವಾಮಿ ಅವರು ಸಹಿಸುತ್ತಿಲ್ಲ ಎನ್ನುತ್ತಿದೆ ಬಿಜೆಪಿ, 'ಭೂತದ ಬಾಯಲ್ಲಿ ಭಗದ್ಗೀತೆ' ಎಂದರೆ ಇದೇ. ಧರ್ಮ, ಜಾತಿ, ಆಚಾರ, ವಿಚಾರ, ಆಹಾರದ ವಿಷಯದಲ್ಲೇ ವಿಷ-ವಿಕೃತಿಗಳನ್ನು ಬಿತ್ತಿದ ಬಿಜೆಪಿ, ಈಗ ಸಹಿಷ್ಣುತೆಯ ಬಗ್ಗೆ ಪಾಠ ಬಿಗಿಯುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಸುಳ್‌ ಬಿಜೆಪಿ, ಸುಳ್‌ ಸಿಎಂ:

20 ದಿನಗಳ ಹಿಂದೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ  ಅವರು ಮಾಜಿ ಪ್ರಧಾನಿಯ ನಿವಾಸಕ್ಕೆ ಭೇಟಿ ನೀಡಿ ಮೃತ್ತಿಕೆ ಸಂಗ್ರಹದ ಬಗ್ಗೆ ತಿಳಿಸಿ ಆಹ್ವಾನಿಸಿದ್ದರಷ್ಟೇ. ಆದರೆ, ಮುಖ್ಯಮಂತ್ರಿಗಳು ಪ್ರತಿಮೆ ಅನಾವರಣಕ್ಕೆ ಆಹ್ವಾನಿಸಿದ್ದರು, ಮತ್ತೂ ಆಹ್ವಾನ ಪತ್ರಿಕೆಯಲ್ಲೂ ದೇವೇಗೌಡರ ಹೆಸರನ್ನು ನಮೂದಿಸಲಾಗಿತ್ತೆಂದು ಹಸಿಸುಳ್ಳನ್ನೇ ಬಿಜೆಪಿ ಟ್ವೀಟಿಸಿದೆ. ಬಿಜೆಪಿ 'ಗೊಬೆಲ್ ಸಂತತಿಯ ಶಿಶು' ಎನ್ನುವುದಕ್ಕೆ ಇದಕ್ಕಿಂತ ಸತ್ಯ ಸಾಕ್ಷ್ಯ ಬೇಕಾ? 'ಸುಳ್‌ ಬಿಜೆಪಿ'ಗೆ ಸತ್ಯವೆಂದರೆ ಅಪಥ್ಯ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 'ಸುಳ್‌ ಸಿಎಂ' ಎಂದೇ ಪ್ರಖ್ಯಾತಿ ಆಗುತ್ತಿದ್ದಾರೆ. ಇದಲ್ಲವೇ ವಿಪರ್ಯಾಸ? ಎಂದು ಜೆಡಿಎಸ್ ಹೇಳಿದೆ.

ಕುಲ ಕಿಚ್ಚಿನ ರಾಜಕೀಯ:

ನಾಡಪ್ರಭುಗಳ ವಿಚಾರದಲ್ಲೂ ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಅರ್ಧದಿನದ ಅರೆಬರೆ ಭೇಟಿಯಲ್ಲಿ ಘನವೇತ್ತ ಪ್ರಧಾನಿಗಳು ಮಾಡಿದ್ದಾದರೂ ಏನು? 'ಒಂದೇ ಕಲ್ಲಿನಲ್ಲಿ ನಾಲ್ಕು ಜಾತಿಗಳ ಮತಬುಟ್ಟಿಗೆ ಕೈ ಹಾಕಿದ ಪ್ರಧಾನಿ', 'ಪ್ರತಿಮಾ ಪಥ, ಮೋದಿ ರಥ' ಎನ್ನುವ ಸುದ್ದಿಗಳನ್ನು ರಾಜ್ಯ ಬಿಜೆಪಿ ನೋಡಲಿಲ್ಲವೆ? ಜಾತಿವಾರು ಮತಗಳ ಧ್ರುವೀಕರಣಕ್ಕೆ ಹೊರಟವರು ಯಾರು? ಶ್ರೀ ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು? ಸಂತ ಕನಕದಾಸರ ʼಕುಲ ಕುಲವೆಂದು ಹೊಡೆದಾಡದಿರಿ..ʼ ಪದವನ್ನು ಹೇಳುತ್ತಲೇ ʼಕುಲಕಿಚ್ಚಿನ ರಾಜಕೀಯʼ ಮಾಡಿದವರು ಯಾರು? ಅಂಗೈ ಹುಣ್ಣಿಗೆ ಕನ್ನಡಿ ಯಾಕೆ? ಜೆಡಿಎಸ್ ಕೇಳಿದೆ.

ಸಂಸ್ಕಾರವೇ ಗೊತ್ತಿಲ್ಲದ ಪಕ್ಷಕ್ಕೆ ಶಿಷ್ಟಾಚಾರ ಮಾತೇಕೆ? ಅದು ತನಗಿಲ್ಲ ಎಂದು ರಾಜ್ಯ ಬಿಜೆಪಿ  ಸಾಬೀತುಪಡಿಸಿದೆ. ಕನ್ನಡದ ಆಚಾರ-ವಿಚಾರಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವ ಆ ಪಕ್ಷ, ಕನ್ನಡನಾಡಿಗೆ ಬಹುದೊಡ್ಡ ಬೆದರಿಕೆ ಎಂದು ಜೆಡಿಎಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.

Similar News