ಮುಕೇಶ್ ಅಂಬಾನಿ ಖ್ಯಾತ ಫುಟ್ಬಾಲ್ ಕ್ಲಬ್ ಲಿವರ್‌ಪೂಲ್ ಎಫ್‌ಸಿ ಕ್ಲಬ್ ಖರೀದಿ ವರದಿ ಬಗ್ಗೆ ರಿಲಯನ್ಸ್ ಸ್ಪಷ್ಟಣೆ

Update: 2022-11-14 12:48 GMT

ಹೊಸದಿಲ್ಲಿ: ಭಾರತದ ಬಿಲಿಯಾಧಿಪತಿ ಮುಕೇಶ್ ಅಂಬಾನಿಯವರು (Mukesh Ambani) ವಿಶ್ವಪ್ರಸಿದ್ಧ ಇಂಗ್ಲೀಷ್ ಫುಟ್ಬಾಲ್ ಕ್ಲಬ್ ಲಿವರ್‌ಪೂಲ್ ಎಫ್‌ಸಿ (Liverpool FC) ಖರೀದಿಗಾಗಿ ರಂಗಪ್ರವೇಶ ಮಾಡಿದ್ದಾರೆ ಎಂದು ಪ್ರಮುಖ ಇಂಗ್ಲಿಷ್ ದೈನಿಕದಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿತ್ತು. ಹಾಲಿ ಕ್ಲಬ್‌ನ ಒಡೆತನ ಹೊಂದಿರುವ ಫೆನ್‌ವೇ ಸ್ಪೋರ್ಟ್ಸ್ ಗ್ರೂಪ್(ಎಫ್‌ಎಸ್‌ಜಿ) ಅದರ ಮಾರಾಟಕ್ಕೆ ಮುಕ್ತ ಮನಸ್ಸು ಹೊಂದಿದೆ ಮತ್ತು ವಿಶ್ವದಲ್ಲಿ ಎಂಟನೇ ಸಿರಿವಂತ ವ್ಯಕ್ತಿಯಾಗಿರುವ ಅಂಬಾನಿ ಖರೀದಿಗೆ ಉತ್ಸುಕರಾಗಿದ್ದಾರೆ ಎಂದು ಮಿರರ್ ಸ್ಪೋರ್ಟ್ ತನ್ನ ವಿಶೇಷ ವರದಿಯಲ್ಲಿ ಬಹಿರಂಗಗೊಳಿಸಿತ್ತು.

ಕ್ಲಬ್‌ನ ಮಾಲಿಕರು ಅದನ್ನು ನಾಲ್ಕು ಶತಕೋಟಿ ಪೌಂಡ್‌ಗಳಿಗೆ ಮಾರಲು ಸಿದ್ಧರಿದ್ದಾರೆ ಎನ್ನಲಾಗಿದೆ ಮತ್ತು ಖರೀದಿಗೆ ಭಾರೀ ಪೈಪೋಟಿಯ ಸಾಧ್ಯತೆಯಿದ್ದರೂ ಸುಮಾರು 90 ಶತಕೋಟಿ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಅಂಬಾನಿಯವರಿಗೆ ಇದೊಂದು ಸಮಸ್ಯೆಯೇನಲ್ಲ.
ಆದಾಗ್ಯೂ ಅಂಬಾನಿ ಲಿವರ್‌ಪೂಲ್ ಎಫ್‌ಸಿ ಖರೀದಿಗೆ ಮುಂದಾಗಿದ್ದಾರೆ ಎನ್ನುವುದನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿ.ರವಿವಾರ ನಿರಾಕರಿಸಿದೆ. ಅದನ್ನು ಸಂಪರ್ಕಿಸಿದಾಗ ಲಿವರ್‌ಪೂಲ್ ಎಫ್‌ಸಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಲಿವರ್‌ಪೂಲ್ ಎಫ್‌ಸಿ ಜೊತೆ ಅಂಬಾನಿ ಹೆಸರನ್ನು ತಳುಕು ಹಾಕಿದ್ದು ಇದೇ ಮೊದಲೇನಲ್ಲ. 2010ರಲ್ಲಿ ಎಫ್‌ಎಸ್‌ಜಿ ಲಿವರ್‌ಪೂಲ್ ಎಫ್‌ಸಿಯನ್ನು ಖರೀದಿಸುವ ಮುನ್ನ ಅಂಬಾನಿ ಅದರ ಮೇಲೆ ಕಣ್ಣಿರಿಸಿದ್ದರು. 2010ರಲ್ಲಿ ಸಹಾರಾ ಗ್ರೂಪ್‌ನ ಸುಬ್ರತಾ ರಾಯ್ ಮತ್ತು ಅಂಬಾನಿ ಕ್ಲಬ್‌ನ ಆಗಿನ ಮಾಲಿಕರಾಗಿದ್ದ ಟಾಮ್ ಹಿಕ್ಸ್ ಮತ್ತು ಜಾರ್ಜ್ ಜಿಲೆಟ್ ಅವರಿಂದ ಶೇ.51ರಷ್ಟು ಕ್ಲಬ್‌ನ ಪಾಲು ಬಂಡವಾಳವನ್ನು ಖರೀದಿಸಲು ಬಿಡ್‌ನಲ್ಲಿದ್ದರು. ಅಂಬಾನಿ ಪ್ರಸ್ತುತ ಐಪಿಎಲ್ ಪ್ರಮುಖ ತಂಡ ಮುಂಬೈ ಇಂಡಿಯನ್ಸ್‌ನ ಒಡೆತನವನ್ನು ಹೊಂದಿದ್ದು,ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಫೋರ್ಬ್ಸ್ ಪಟ್ಟಿಯಲ್ಲಿ ಲಿವರ್‌ಪೂಲ್ ಎಫ್‌ಸಿ ಅನ್ನು ವಿಶ್ವದ ನಾಲ್ಕನೇ ಅತ್ಯಮೂಲ್ಯ ಫುಟ್ಬಾಲ್ ಕ್ಲಬ್ ಎಂದು ಹೆಸರಿಸಲಾಗಿದ್ದು, ಅದು 4.45 ಶತಕೋಟಿ ಡಾಲರ್‌ಗಳ ಅಂದಾಜು ಮೌಲ್ಯವನ್ನು ಹೊಂದಿದೆ.

ಇದನ್ನೂ ಓದಿ: ವಿದ್ಯುನ್ಮಾನ ಸಾಧನಗಳ ಜಪ್ತಿ ಕುರಿತು ಅರ್ಜಿಗೆ ಉತ್ತರಿಸದ ಕೇಂದ್ರಕ್ಕೆ ದಂಡ ವಿಧಿಸಿದ ಸುಪ್ರೀಂಕೋರ್ಟ್

Similar News