ರಾಜಸ್ಥಾನ: ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ; 30 ಮಂದಿಗೆ ಜೀವಾವಧಿ ಶಿಕ್ಷೆ

Update: 2022-11-19 17:55 GMT

ಜೈಪುರ, ನ. 19:  2011ರಲ್ಲಿ ಪೊಲೀಸ್ ಅಧಿಕಾರಿ ಫೂಲ್ ಮುಹಮ್ಮದ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ರಾಜಸ್ಥಾನದ ಸವಾಯಿ ಮಧೋಪುರ ಜಿಲ್ಲೆಯ ವಿಶೇಷ ನ್ಯಾಯಾಲಯ ಶುಕ್ರವಾರ 30 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.  

ಸಿಬಿಐ ತನಿಖೆ ನಡೆಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ಮಾಜಿ ಪೊಲೀಸ್ ಉಪ ಅಧೀಕ್ಷಕ ಮಹೇಂದ್ರ ಸಿಂಗ್ ಸಹಿತ 30 ಮಂದಿಯನ್ನ ದೋಷಿ ಎಂದು ಪರಿಗಣಿಸಿತ್ತು. 49 ಮಂದಿಯನ್ನು ಖುಲಾಸೆಗೊಳಿಸಿತ್ತು. 

‘‘ಪ್ರಕರಣದಲ್ಲಿ ಆಗಿನ ಪೊಲೀಸ್ ಉಪ ಅಧೀಕ್ಷಕರ ಸಹಿತ 30 ಮಂದಿಯನ್ನು ನ್ಯಾಯಾಲಯ ದೋಷಿಗಳು ಎಂದು ಪರಿಗಣಿಸಿದೆ. ನ್ಯಾಯಾಲಯ ಶುಕ್ರವಾರ ಶಿಕ್ಷೆ ಘೋಷಿಸುವಾಗ ಎಲ್ಲರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೋಷಿಗಳಿಗೆ ಬೇರೆ ಬೇರೆ ಮೊತ್ತದ ದಂಡ ವಿಧಿಸಿದೆ’’ ಎಂದು ಸಿಬಿಐ ನ್ಯಾಯವಾದಿ ಶ್ರಿದಾಸ್ ಸಿಂಗ್ ಅವರು ತಿಳಿಸಿದ್ದಾರೆ. 

ಹತ್ಯೆ ಪ್ರಕರಣವೊಂದರಲ್ಲಿ ಪೊಲೀಸರ ನಿಷ್ಕ್ರಿಯತೆ ವಿರೋಧಿಸಿ ಸುರ್ವಾಲ್ ಗ್ರಾಮದಲ್ಲಿ 2011 ಮಾರ್ಚ್ 17ರಂದು ವ್ಯಕ್ತಿಯೋರ್ವ ನೀರಿನ ಟ್ಯಾಂಕರ್‌ಗೆ ಏರಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಫೂಲ್ ಮುಹಮ್ಮದ್ ಅಲ್ಲಿಗೆ ಧಾವಿಸಿದ್ದರು. 

ಆ ವ್ಯಕ್ತಿ ಕೆಳಗೆ ಹಾರಿದ್ದ. ಇದರಿಂದ ಅಲ್ಲಿ ಸೇರಿದ್ದ ಗುಂಪು ಉದ್ರಿಕ್ತಗೊಂಡ ಪೊಲೀಸ್ ಅಧಿಕಾರಿಯನ್ನು ಗುರಿಯಾಗಿರಿಸಿ ದಾಳಿ ನಡೆಸಿತ್ತು. ಜೀಪ್‌ನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಅವರ ಮೇಲೆ ಕಲ್ಲು ತೂರಾಟ ನಡೆಸಿತ್ತು.   ಕಲ್ಲು ಬಡಿದು ಮುಹಮ್ಮದ್ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಇದೇ ಸಂದರ್ಭ ಗುಂಪು ಅವರ ವಾಹನಕ್ಕೆ ಬೆಂಕಿ ಹಚ್ಚಿತ್ತು. ಇದರಿಂದ ಮುಹಮ್ಮದ್ ಅವರು ಸಜೀವ ದಹನವಾಗಿದ್ದರು. 
ಈ ಘಟನೆಯ ಬಳಿಕ ರಾಜ್ಯ ಸರಕಾರ ಮುಹಮ್ಮದ್ ಅವರಿಗೆ ಹುತಾತ್ಮನ ಸ್ಥಾನ ನೀಡಿತ್ತು. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. 

Similar News