‘ದತ್ತು’ ಪಡೆಯುವ ಪ್ರಕ್ರಿಯೆ ಸರಳ: ‘ದತ್ತು’ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾವಣೆ

Update: 2022-11-19 18:32 GMT

ಬೆಂಗಳೂರು, ನ. 19: ಮಕ್ಕಳನ್ನು ದತ್ತು ಪಡೆದುಕೊಳ್ಳಲು ಉಪಯೋಗವಾಗಲೆಂದು ದತ್ತು ಆದೇಶವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಹಿಂದಿನಂತೆ ದತ್ತು ಆದೇಶವನ್ನು ನ್ಯಾಯಾಲಯದಲ್ಲಿ ಪಡೆಯುವ ಅಗತ್ಯವಿಲ್ಲ. ದತ್ತು ಕಾರ್ಯಕ್ರಮವನ್ನು ಸರಳೀಕರಿಸುವ ನಿಟ್ಟಿನಲ್ಲಿ ಸರಕಾರವು ಪ್ರಸಕ್ತ ವರ್ಷದಿಂದ ಈ ನಿಯಮವನ್ನು ಜಾರಿಗೊಳಿಸಿದೆ. 

ಕೇಂದ್ರ ಸರಕಾರವು ಮಗುವನ್ನುದತ್ತು ಪಡೆಯಲು www.cara.nic.in ವೆಬ್‍ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದು, ಪೋಷಕರು ಆನ್‍ಲೈನ್‍ನಲ್ಲಿಯೇ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಅವಕಾಶ ನೀಡಲಾಗಿದೆ. ನಂತರ ವಿಶೇಷ ದತ್ತು ಕೇಂದ್ರಗಳು ಪೋಷಕರ ಗೃಹ ಅಧ್ಯಯನವನ್ನು ನಡೆಸಿ, ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡುತ್ತವೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 38 ವಿಶೇಷ ದತ್ತು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಗೃಹ ಅಧ್ಯಯನದ ಬಳಿಕ ದತ್ತು ಕೇಂದ್ರಗಳಿಗೆ ಪೋಷಕರು ಭೇಟಿ ನೀಡಿ, ದತ್ತು ಪಡೆಯಬಹುದು. ಹೀಗೆ ಅರ್ಜಿ ಸಲ್ಲಿಸಿ, ಮಗುವನ್ನು ದತ್ತು ಪಡೆಯಲು ಪೋಷಕರಿಗೆ 135 ದಿನಗಳು ಬೇಕಾಗಿರುತ್ತದೆ. ಈ ಅವಧಿಯಲ್ಲಿ ಮಗುವಿನ ಮತ್ತು ಪೋಷಕರ ನಡುವೆಒಪ್ಪಿಗೆ ಪಕ್ರಿಯೆ ಸೇರಿ, ಕಾನೂನಿನ ಎಲ್ಲ ಅಗತ್ಯ ಅಂಶಗಳನ್ನು ಪಾಲನೆ ಮಾಡಲಾಗಿರುತ್ತದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯವು ತಿಳಿಸಿದೆ.

ರಾಜ್ಯದಲ್ಲಿ ಐದು ವರ್ಷಗಳಿಂದ ಇಲ್ಲಿಯ ವರೆಗೂ 1,243 ಮಕ್ಕಳನ್ನು ದತ್ತು ನೀಡಲಾಗಿದ್ದು, ಆಪೈಕಿ 5 ವರ್ಷಗಳಿಂದ 50 ಮಂದಿ 8ವರ್ಷ ಮೇಲ್ಪಟ್ಟ ಗಂಡು ಮಕ್ಕಳನ್ನು ಮತ್ತು 68 ಜನ 8 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳನ್ನು ದತ್ತು ನೀಡಲಾಗಿದೆ. ವೆಬ್‍ಸೈಟ್ ಮೂಲಕ ಪ್ರಸ್ತುತ ಮಕ್ಕಳನ್ನು ಪಡೆಯಲು 3,588 ದಂಪತಿ ನೋಂದಣಿ ಮಾಡಿಕೊಂಡಿದ್ದು, 200 ರಿಂದ 300 ಮಕ್ಕಳು ಮಾತ್ರವೇ ವಾರ್ಷಿಕವಾಗಿ ದತ್ತು ಸಂಸ್ಥೆಗಳಿಗೆ ಸೇರುತ್ತಿದ್ದಾರೆ.

ಮಾರಕ ಖಾಯಿಲೆಯನ್ನು ಹೊಂದಿರುವ ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ಪೋಷಕರು ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗಿರುವುದಿಲ್ಲ. ಮಾನಸಿಕ, ಭಾವನಾತ್ಮಕ ಹಾಗೂ ಆರ್ಥಿಕವಾಗಿ ಸಬಲರಾಗಿರುವ ಪೋಷಕರು ಮಕ್ಕಳನ್ನು ದತ್ತು ಪಡೆದುಕೊಳ್ಳಬಹುದು. ಅವಿವಾಹಿತ, ವಿಚ್ಛೇದಿತ ಅಥವಾ ವಿಧವಾ ಸ್ತ್ರೀ ಯಾವುದೇ ಲಿಂಗದ ಮಗುವನ್ನು ದತ್ತು ಪಡೆಯಬಹುದು. ಆದರೆ ಅವಿವಾಹಿತ, ವಿಚ್ಛೇದಿತ ಪುರುಷರಿಗೆ ಹೆಣ್ಣು ಮಗುವನ್ನು ದತ್ತು ನೀಡುವುದಿಲ್ಲ.

ವಿವಾಹಿತರಾಗಿದ್ದರೆ, ಮಕ್ಕಳನ್ನು ದತ್ತು ಪಡೆಯಲು ದಂಪತಿ ಒಪ್ಪಿಗೆ ಇರಬೇಕು, ಜೊತೆಗೆ ಕನಿಷ್ಟ ಎರಡು ವರ್ಷ ಉತ್ತಮ ಸಾಂಸಾರಿಕ ಜೀವನವನ್ನು ನಡೆಸಿರಬೇಕಾಗಿರುತ್ತದೆ. ಎರಡು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವವರು ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಪಡೆಯಲು ಮಾತ್ರ ಅರ್ಹರಿರುತ್ತಾರೆ. ದತ್ತು ಪಡೆದ ಮಕ್ಕಳಿಗೆ ವಿಶೇಷ ದತ್ತು ಕೇಂದ್ರದವರು ಸಂಬಂಧಪಟ್ಟ ಪ್ರಾಧಿಕಾರದಿಂದ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ, ಐದು ದಿನಗಳಲ್ಲಿಯೇ ಪತ್ರವನ್ನು ಒದಗಿಸುತ್ತಾರೆ. 

‘ಯಾವುದೇ ವ್ಯಕ್ತಿ ಅನಧಿಕೃತವಾಗಿ ಮಗುವನ್ನು ದತ್ತು ಪಡೆಯುವುದು ಅಥವಾ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಮಕ್ಕಳ ಸಂಸ್ಥೆಗಳು, ಆಸ್ಪತ್ರೆ, ನರ್ಸಿಂಗ್ ಹೋಮ್, ಹೆರಿಗೆ ಆಸ್ಪತ್ರಗಳ ಸಿಬ್ಬಂದಿಗಳಿಂದ ಇಂತಹ ಕಾನೂನು ಬಾಹಿರ ದತ್ತು ಪ್ರಕರಣ ಕಂಡು ಬಂದರೆ ಸಿಬ್ಬಂದಿಗೆ 3ರಿಂದ 7 ವರ್ಷದ ವರೆಗೆ ಕಾರಗೃಹ ಶಿಕ್ಷೆ ಹಾಗೂ ವ್ಯಕ್ತಿಗಳಿಗೆ 5 ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಎರಡು ವರ್ಷಗಳಿಂದ ಮಕ್ಕಳನ್ನು ಮಾರಾಟ ಮಾಡುವವರ ವಿರುದ್ಧ 45 ಎಫ್‍ಐಆರ್ ದಾಖಲಿಸಲಾಗಿದೆ’
-ಜಗನ್ನಾಥ್‍ದತ್ತಿ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ನಿರ್ದೇಶಕ, ಹೊಸದಿಲ್ಲಿ

Similar News