ಬುಡಕಟ್ಟು ಸಮುದಾಯದ ಅಸ್ಮಿತೆಯ ಭಾಗ ಬಿರ್ಸಾ ಮುಂಡಾ

Update: 2022-11-20 03:40 GMT

18ನೇ ಶತಮಾನದಲ್ಲಿ ಇಂದಿನ ಜಾರ್ಖಂಡ್‌ನ ಛೋಟಾ ನಾಗ್ಪುರ ಪ್ರದೇಶದಲ್ಲಿ ಪ್ರಕೃತಿಯ ಮಡಿಲ ಮಕ್ಕಳಂತೆ ಬದುಕುತ್ತಿದ್ದವರು ಮುಂಡಾ ಬುಡಕಟ್ಟು ಸಮುದಾಯ. ಅವರ ಜೀವನವಿಧಾನಕ್ಕೆ ಅಡ್ಡಿಪಡಿಸಲು ಶುರು ಮಾಡಿದವರು ಬ್ರಿಟಿಷರು. ಅವರ ಬದುಕಿನ ಹಕ್ಕುಗಳನ್ನೇ ಕಸಿದುಕೊಳ್ಳುವ ನಡೆಯಾಗಿತ್ತು ಅದು. ಅರಣ್ಯ ಭೂಮಿಗಳ ಮೇಲೆ ನಿಯಂತ್ರಣ ಸ್ಥಾಪಿಸಿ ಬಳಸಿಕೊಳ್ಳುವುದಕ್ಕೆ ಮುಂದಾದ ಬ್ರಿಟಿಷರು, ಸ್ಥಳೀಯ ಜಮೀನ್ದಾರರೊಂದಿಗೆ ಮೈತ್ರಿ ಮಾಡಿಕೊಂಡು ತಮ್ಮ ಕೆಲಸ ಸಾಧಿಸತೊಡಗಿದ್ದರು. ಹೀಗೆ ಬುಡಕಟ್ಟು ಜನರ ಸ್ಥಿತಿ ಶೋಚನೀಯವಾಗಿದ್ದ ಹೊತ್ತಲ್ಲಿಯೇ 1875ರಲ್ಲಿ ಜನಿಸಿದ್ದ ಬಿರ್ಸಾ ಮುಂಡಾ ತನ್ನ ಜನರ ಹಕ್ಕುಗಳಿಗಾಗಿ ಹೋರಾಡಿದ್ದು, ಇವತ್ತಿಗೂ ಅವರ ಅಸ್ಮಿತೆಯ ಭಾಗವಾಗುಳಿದಿರುವುದು ನಮ್ಮ ಸಾಂಸ್ಕೃತಿಕ ಕಥನಗಳಲ್ಲಿ ಒಂದು ಮಹತ್ವದ ಅಧ್ಯಾಯವಾಗಿದೆ. 

ಅದಿವಾಸಿ ಸಮುದಾಯ ತನ್ನ ಹಕ್ಕುಗಳಿಗಾಗಿ ಸತತವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ಭಾರತದ ಸ್ವಾತಂತ್ರ್ಯ ಹೋರಾಟದ್ದೇ ಒಂದು ಭಾಗವಾಗಿಯೂ ಗಮನಾರ್ಹವಾದುದಾದಗಿದೆ. 1830ರಿಂದ 1925ರ ಅವಧಿಯು ಬ್ರಿಟಿಷರ ಬೆವರಿಳಿಯುವಂತೆ ಮಾಡಿದ್ದ ಆದಿವಾಸಿ ದಂಗೆಗಳ ಕಾಲಘಟ್ಟವಾಗಿದೆ. ಮುಖ್ಯವಾಗಿ ಜಾರ್ಖಂಡ್‌ನ ಛೋಟಾ ನಾಗ್ಪುರ ಅರಣ್ಯ ಪ್ರದೇಶದಲ್ಲಿ ನಡೆದ ಈ ದಂಗೆಗಳು ಅಲ್ಲಿನ ಆದಿವಾಸಿಗಳ ಮೇಲೆ ಬ್ರಿಟಿಷರು ಮತ್ತು ಜಮೀನ್ದಾರರಿಂದ ನಿರಂತರ ನಡೆಯುತ್ತಿದ್ದ ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧದ ಕದನಗಳಾಗಿದ್ದವು. ಇಂತಹ ಹೋರಾಟವನ್ನು ಮೊತ್ತ ಮೊದಲು ಸಂಘಟಿಸಿ, ಬ್ರಿಟಿಷರು ಮತ್ತು ಜಮೀನ್ದಾರರ ವಿರುದ್ಧ ದನಿಯೆತ್ತಿದ ಬುಡಕಟ್ಟು ನಾಯಕನೇ ಬಿರ್ಸಾ ಮುಂಡಾ. ತಮ್ಮ ನೆಲ, ನೀರಿನ ಹಕ್ಕಿಗಾಗಿ ಅರಣ್ಯವಾಸಿಗಳನ್ನೆಲ್ಲ ಒಗ್ಗೂಡಿಸಿದ್ದರ ಪರಿಣಾಮವಾಗಿಯೇ ಜಾರ್ಖಂಡ್, ಛತ್ತೀಸ್‌ಗಡದಂತಹ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯ, ಸಂಸ್ಕೃತಿಯ ಬಹುದೊಡ್ಡ ಧಾರೆಯೊಂದನ್ನು ನಾವು ಇಂದು ಕಾಣಲು ಸಾಧ್ಯವಾಗಿರುವುದು. ಇಂದಿಗೂ ಆದಿವಾಸಿಗಳ ಹೋರಾಟಗಳಿಗೆ ಸ್ಫೂರ್ತಿಯಾಗಿರುವ ಚಾರಿತ್ರಿಕ ನಾಯಕ ಬಿರ್ಸಾ ಮುಂಡಾ. 

ಭಾರತೀಯ ಸಂಸ್ಕೃತಿಗೆ ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಸ್ಮರಿಸುವ ದಿನವಾಗಿ ಬಿರ್ಸಾ ಮುಂಡಾ ಜನ್ಮದಿನವನ್ನು (ನವೆಂಬರ್ 15)ಕೇಂದ್ರವು ‘ಜನಜಾತೀಯ ಗೌರವ್ ದಿವಸ್’ ಎಂದು ಆಚರಿಸುತ್ತದೆ. ಬಿರ್ಸಾ ಮುಂಡಾ ಜನ್ಮಸ್ಥಳವಾದ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಉಲಿಹತು ಗ್ರಾಮದಲ್ಲಿ ಭಗವಾನ್ ಎಂದು ತಮ್ಮ ನಾಯಕನನ್ನು ಸ್ಮರಿಸುತ್ತದೆ ಮುಂಡಾ ಸಮುದಾಯ. 

ಬಿರ್ಸಾ ಮುಂಡಾ ಪ್ರಾಥಮಿಕ ಶಿಕ್ಷಣ ಪಡೆದದ್ದು ಶಿಕ್ಷಕ ಜೈಪಾಲ್ ನಾಗ್ ಮಾರ್ಗದರ್ಶನದಲ್ಲಿ. ಅವರಿಂದ ಪ್ರಭಾವಿತನಾದ ಬಿರ್ಸಾ ಜರ್ಮನ್ ಮಿಷನ್ ಶಾಲೆಗೆ ಸೇರುವ ಸಲುವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದನೆನ್ನುತ್ತದೆ ಇತಿಹಾಸ. ಆದರೆ ಬ್ರಿಟಿಷರ ರೀತಿಯು ಬುಡುಕಟ್ಟು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲವು ವರ್ಷಗಳ ಬಳಿಕ ಜರ್ಮನ್ ಶಾಲೆ ತೊರೆದ ಬಿರ್ಸಾ, 1886ರಿಂದ 1890ರವರೆಗೆ, ಮಿಷನರಿ ವಿರೋಧಿ ಮತ್ತು ಸರಕಾರಿ ವಿರೋಧಿ ಹೋರಾಟಗಳ ಸರ್ದಾರಿ ಆಂದೋಲನದ ಕೇಂದ್ರಕ್ಕೆ ಸಮೀಪವಿರುವ ಚೈಬಾಸಾದಲ್ಲಿ ಕಳೆಯುತ್ತಿದ್ದಾಗ, ಸರ್ದಾರಿ ಆಂದೋಲನದ ಪ್ರಭಾವಕ್ಕೆ ಒಳಗಾದದ್ದು ಮುಂದಿನೆಲ್ಲವನ್ನೂ ನಿರ್ಧರಿಸಿತು. 1890ರಲ್ಲಿ ಚೈಬಾಸಾವನ್ನು ಬಿಡುವ ಹೊತ್ತಿಗೆ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧದ ಬುಡಕಟ್ಟು ಸಮುದಾಯಗಳ ಚಳವಳಿಯಲ್ಲಿ ಮೊದಲಿಗನಾಗಿ ಬಿರ್ಸಾ ಗುರುತಿಸಿಕೊಂಡಾಗಿತ್ತು. 
ಬುಡಕಟ್ಟು ಜನರು ಎದುರಿಸುತ್ತಿದ್ದ ಸಮಸ್ಯೆಗಳಿಗಳ ವಿರುದ್ಧ ಹೋರಾಡಲು ಜನರನ್ನು ಒಟ್ಟುಗೂಡಿಸಿದ ಬಿರ್ಸಾ, ‘ಬಿರ್ಸೈತ್’ ನಂಬಿಕೆಯನ್ನು ಮುನ್ನಡೆಸುವ ಮೂಲಕ ಜನರ ನಡುವೆ ದೈವತ್ವ ಪಡೆದ ನಾಯಕನಾದ. ಮುಂಡಾ ಮತ್ತು ಓರಾನ್ ಸಮುದಾಯಗಳ ಸದಸ್ಯರು ಬಿರ್ಸೈತ್ ಪಂಥವನ್ನು ಸೇರಲು ಪ್ರಾರಂಭಿಸಿದಾಗ ಅದು ಬ್ರಿಟಿಷ್ ಮತಾಂತರ ಚಟುವಟಿಕೆಗಳಿಗೆ ಸವಾಲಾಗಿ ಮಾರ್ಪಟ್ಟಿತು.

ಆದಿವಾಸಿಗಳಿಗೆ ಅರಣ್ಯದ ಒಳಗೆ ಹೋಗಲು ಅವಕಾಶ ನೀಡದ 1882ರ ಭಾರತದ ಅರಣ್ಯಗಳ ಕಾಯ್ದೆ ವಿರುದ್ಧ ಬಿರ್ಸಾ ಮುಂಡಾ ನಾಯಕತ್ವದಲ್ಲಿ ಹಲವಾರು ಹೋರಾಟಗಳು ನಡೆದವು. ಆದಿವಾಸಿಗಳು ಕೃಷಿ ಮಾಡಬೇಕೆಂದು ಬಿರ್ಸಾ ಪ್ರೇರೇಪಿಸಿದ್ದು ಈ ಹಂತದಲ್ಲಿಯೇ. ತೆರಿಗೆಯಂಥ ವಿಚಾರದಲ್ಲಿ ಆದಿವಾಸಿಗಳು ಯಾವುದೇ ಸರಕಾರಿ ಆದೇಶಕ್ಕೆ ಮಣಿಯದಂತೆ ಅವರಿಗೆ ಬೆಂಬಲವಾಗಿ ಬಿರ್ಸಾ ಹೋರಾಟವಿತ್ತು. ಬೃಹತ್ ದಂಗೆಯನ್ನು ಸಂಘಟಿಸುವ ಮೂಲಕ, ಬ್ರಿಟಿಷರ ಆಳ್ವಿಕೆ ಮುಗಿದಿದೆ ಎಂಭ ಘೋಷಣೆಗಳನ್ನೂ ಪ್ರಚಾರ ಮಾಡಲಾಯಿತು. 

1899ರ ಉಲ್ಗುಲನ್ ಚಳುವಳಿಯು ಬ್ರಿಟಿಷರನ್ನು ಓಡಿಸಲು ಶಸ್ತ್ರಾಸ್ತ್ರಗಳು ಮತ್ತು ಗೆರಿಲ್ಲಾ ಯುದ್ಧದ ಬಳಕೆಯನ್ನು ಒಳಗೊಂಡ ಹೋರಾಟವಾಗಿತ್ತು. ವಸಾಹತುಶಾಹಿ ಕಾನೂನುಗಳ ವಿರುದ್ಧದ ಈ ಹೋರಾಟದ ಮೂಲಕ ಬಿರ್ಸಾ, ಬಾಡಿಗೆಯನ್ನು ಪಾವತಿಸಲು ನಿರಾಕರಿಸುವಂತೆ ಆದಿವಾಸಿಗಳನ್ನು ಪ್ರೋತ್ಸಾಹಿಸಿದ್ದು ದೊಡ್ಡ ಹೆಜ್ಜೆ. ಮೂಢನಂಬಿಕೆಯ ವಿರುದ್ಧವೂ ಗಮನ ಹರಿಸಿದ ಈ ಹೋರಾಟ ಸಾಮಾಜಿಕ ಕ್ಷೇತ್ರದಲ್ಲಿಯೂ ಬದಲಾವಣೆಗೆ ಹಾದಿ ಮಾಡಿತು. ‘ಭಗವಾನ್’ (ದೇವರು) ಎಂದೂ, ‘ಧರತಿ ಅಬಾ’ (ಭೂಮಿಯ ತಂದೆ) ಎಂದೂ ಅನುಯಾಯಿಗಳು ಬಿರ್ಸಾನನ್ನು ಗೌರವಿಸತೊಡಗಿದರು. 

ಆದರೆ ಬ್ರಿಟಿಷರು ಚಳವಳಿಯನ್ನು ಹತ್ತಿಕ್ಕಿದರು. 1900ರ ಮಾರ್ಚ್ 3ರಂದು, ಮುಂಡಾ ಚಕ್ರಧರಪುರದ ಜಾಮ್ಕೋಪೈ ಅರಣ್ಯದಲ್ಲಿ ತನ್ನ ಬುಡಕಟ್ಟು ಗೆರಿಲ್ಲಾ ಸೈನ್ಯದೊಂದಿಗೆ ಮಲಗಿದ್ದಾಗ ಬ್ರಿಟಿಷರು ಬಿರ್ಸಾನನ್ನು ಬಂಧಿಸಿದರು. ಮುಂದೆ, 1900ರ ಜೂನ್ 9ರಂದು ಜೈಲಿನಲ್ಲಿಯೇ ಕೊನೆಯುಸಿರೆಳೆದಾಗ ಬಿರ್ಸಾ ವಯಸ್ಸು ಬರೀ 25. ಕಾಯಿಲೆಯಿಂದ ಸತ್ತಿರುವುದದಾಗಿ ಬ್ರಿಟಿಷರು ಹೇಳಿದರಾದರೂ, ಇಂದಿಗೂ ಸರಕಾರಿ ದಾಖಲೆಗಳನ್ನು ಮುಂಡಾ ಜನಾಂಗ ನಂಬುವುದಿಲ್ಲ. 

ಕಡೆಗೂ ಬಿರ್ಸಾ ಮುಂಡಾ ಹೋರಾಟದ ಫಲವೆನ್ನುವಂತೆ ಜಾರಿಯಾದದ್ದು ತೆನನ್ಸಿ ಕಾಯ್ದೆ. 1990ರಲ್ಲಿ ಜಾರಿಗೆ ಬಂದ ಇದು, ಆದಿವಾಸಿಗಳ ಭೂಮಿಯನ್ನು ಗುರುತಿಸಿತು. ಬೇರೆಯವರು ಆದಿವಾಸಿಗಳ ಭೂಮಿಯನ್ನು ಖರೀದಿಸುವಂತಿಲ್ಲ ಎಂಬ ನಿಯಮವನ್ನು ಒಳಗೊಂಡಿತ್ತು. ಮತ್ತೆ ಆದಿವಾಸಿಗಳು ತಮ್ಮ ತಾಯಮಡಿಲಿನಂಥ ಅರಣ್ಯದೊಳಕ್ಕೆ ಪ್ರವೇಶ ಪಡೆಯುವುದು ಸಾಧ್ಯವಾಯಿತು. ಅರಣ್ಯೋತ್ಪನ್ನಗಳಿಗೆ ಅವರು ಹಕ್ಕುದಾರರಾದರು. ಆದಿವಾಸಿಗಳನ್ನು ಶೋಷಿಸುತ್ತಿದ್ದ ಜಮೀನ್ದಾರರ ಪಡೆ ತಣ್ಣಗಾಗುವಂತಾಯಿತು. 

ಹೀಗೆ ಬ್ರಿಟಿಷರ ವಿರುದ್ಧ ಬುಡಕಟ್ಟು ಸಮುದಾಯವನ್ನು ಸಜ್ಜುಗೊಳಿ ಸುವಲ್ಲಿ ಮತ್ತು ಆದಿವಾಸಿಗಳ ಭೂಮಿಯ ಹಕ್ಕುಗಳನ್ನು ರಕ್ಷಿಸುವ ಕಾನೂನುಗಳು ಬರುವಂತೆ ವಸಾಹತುಶಾಹಿ ಆಡಳಿತದ ಮೇಲೆ ಒತ್ತಡ ತರುವಲ್ಲಿ ಬಿರ್ಸಾ ಪಾತ್ರ ಬಹುದೊಡ್ಡದು. ಬಿರ್ಸಾ ನಾಯಕ ಮಾತ್ರ ವಲ್ಲದೆ, ದೇವರಂತೆ ಅವರಿಗೆ ಕಂಡಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.

Similar News