ತೆಲಂಗಾಣ ಶಾಸಕರಿಗೆ ಆಮಿಷ ಪ್ರಕರಣದಲ್ಲಿ ಒಂದು ಲಕ್ಷ ಪುಟಗಳ ಸಾಕ್ಷ್ಯಗಳಿವೆ: ಪೊಲೀಸ್‌ ಮೂಲಗಳು

Update: 2022-11-21 11:01 GMT

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು, "ಶಾಸಕರ ಖರೀದಿಗೆ ಯತ್ನಿಸಿದ ಆರೋಪದ ಮೇಲೆ ಕುಟುಕು ಕಾರ್ಯಾಚರಣೆ" ಎಂದು ಹೇಳಿರುವ ಆಡಿಯೋ ಮತ್ತು ವಿಡಿಯೋ ಟೇಪ್ ಸೋರಿಕೆಯಾಗಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಮತ್ತು ಇತರ ಪಕ್ಷದ ನಾಯಕರುಗಳ ಹೆಸರನ್ನು ಆರೋಪಿಯು ಸೂಚಿಸಿದ್ದ.

ಈ ಕುರಿತು, ಟಿಆರ್‌ಎಸ್ ಶಾಸಕರನ್ನು ಬೇಟೆಯಾಡಲು ಯತ್ನಿಸಿದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳು ಒಂದು ಲಕ್ಷ ಪುಟಗಳ ದಾಖಲೆಗಳ ರೂಪದಲ್ಲಿ ಅವರ ಬಳಿ 'ಸಾಕ್ಷ್ಯ'ಗಳಿವೆ ಎಂದು ಸೂಚಿಸಿವೆ. ತನ್ನ ಸಂಶೋಧನೆಗಳನ್ನು ಗೌಪ್ಯವಾಗಿಡಲು ಎಸ್‌ಐಟಿಗೆ ತಿಳಿಸಲಾಗಿದೆ, ಆದ್ದರಿಂದ ತನಿಖಾಧಿಕಾರಿಗಳು ಹೆಚ್ಚಿನದನ್ನು ಬಹಿರಂಗಪಡಿಸಿಲ್ಲ ಎಂದು ndtv.com ವರದಿ ಮಾಡಿದೆ.

ನವೆಂಬರ್ 16 ರಂದು ಬಿಜೆಪಿಯ ಹಿರಿಯ ನಾಯಕ ಸಂತೋಷ್‌ ಗೆ ಎಸ್‌ಐಟಿ ನೋಟಿಸ್ ನೀಡಿದ್ದು, ನವೆಂಬರ್ 21 ರಂದು ಬೆಳಿಗ್ಗೆ 10:30 ಕ್ಕೆ ಹೈದರಾಬಾದ್‌ನ ಪೊಲೀಸ್ ಪ್ರಧಾನ ಕಚೇರಿಯ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿರುವ ಎಸ್‌ಐಟಿ ಮುಂದೆ ಹಾಜರಾಗುವಂತೆ ಹೇಳಿತ್ತು. ಆದರೆ, ಬಿಎಲ್ ಸಂತೋಷ್ ಎಸ್ ಐಟಿ ಮುಂದೆ ಹಾಜರಾಗುವುದಿಲ್ಲ ಎಂದು ತಿಳಿದು ಬಂದಿದೆ.

ಬಿಜೆಪಿ ಮೂಲಗಳ ಪ್ರಕಾರ, ಬಿಎಲ್ ಸಂತೋಷ್ ಅವರು ದಿಲ್ಲಿಯಲ್ಲಿ ಇಲ್ಲದ ಕಾರಣ ದಿಲ್ಲಿ ಪೊಲೀಸರ ಮೂಲಕ ನೀಡಬೇಕಿದ್ದ ನೋಟಿಸ್ ಸ್ವೀಕರಿಸಿಲ್ಲ. ಈ ವಿಚಾರದಲ್ಲಿ ಸಹಕರಿಸುವಂತೆ ದಿಲ್ಲಿ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.

ಎಸ್‌ಐಟಿಯಿಂದ ಅನಿಯಂತ್ರಿತ ಮತ್ತು ಅಕ್ರಮವಾಗಿ ನೋಟಿಸ್‌ಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ನವೆಂಬರ್ 18 ರಂದು ನ್ಯಾಯಾಲಯದ ಮೊರೆ ಹೋಗಿತ್ತು. ಅದನ್ನು ಒಪ್ಪಿಕೊಳ್ಳದ ಕೋರ್ಟ್, ಬಿ.ಎಲ್.ಸಂತೋಷ್ ಅವರನ್ನು ಇಲ್ಲಿನ ಪೊಲೀಸರು ಬಂಧಿಸುವುದಿಲ್ಲ ಎಂದು ಸೂಚನೆ ನೀಡಿತ್ತು.

ತೆಲಂಗಾಣ ಡಿಜಿಪಿ ಎಸ್‌ಐಟಿಯನ್ನು ರಚಿಸಿದ್ದು, ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ನೇತೃತ್ವ ವಹಿಸಿದ್ದಾರೆ. ಎಸ್‌ಐಟಿಯ ಹಿರಿಯ ಅಧಿಕಾರಿ ರೇಮಾ ರಾಜೇಶ್ವರಿ ಅವರನ್ನು ಕೇರಳಕ್ಕೆ ಕಳುಹಿಸಲಾಯಿತು ಮತ್ತು ಕೆಲವು ಸುಳಿವುಗಳನ್ನು ತನಿಖೆ ಮಾಡಲು ಮಾತಾ ಅಮೃತಾನಂದಮಯಿ ಆಶ್ರಮಕ್ಕೆ ಭೇಟಿ ನೀಡಲಾಯಿತು.

ಇದನ್ನು ಮುಖ್ಯಮಂತ್ರಿ ಕೆಸಿಆರ್ ಚಿತ್ರಕಥೆ ಬರೆದು ನಿರ್ದೇಶಿಸಿದ ನಾಟಕ ಎಂದು ಕರೆದಿರುವ ಬಿಜೆಪಿ, ಟಿಆರ್‌ಎಸ್ ಶಾಸಕರನ್ನು ಬೇಟೆಯಾಡುವ ಪ್ರಯತ್ನದ ಕುರಿತು ತನಿಖೆ ನಡೆಸಲು ಸಿಬಿಐನಂತಹ ತಟಸ್ಥ ಸಂಸ್ಥೆಯನ್ನು ತನಿಖೆಗೆ ಕೋರಿದೆ.

ಆದರೆ ಸಿವಿ ಆನಂದ್ ನೇತೃತ್ವದ ಎಸ್‌ಐಟಿಯನ್ನು ಹೈಕೋರ್ಟ್ ಮೇಲ್ವಿಚಾರಣೆ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ತನಿಖೆಯ ಫಲಿತಾಂಶಗಳನ್ನು ನ್ಯಾಯಾಲಯದೊಂದಿಗೆ ಮಾತ್ರ ಹಂಚಿಕೊಳ್ಳಲು ಎಸ್‌ಐಟಿಗೆ ಕೇಳಲಾಗಿದೆಯೇ ಹೊರತು ರಾಜಕೀಯ ಕಾರ್ಯಕಾರಿಣಿ ಅಥವಾ ಮಾಧ್ಯಮಗಳೊಂದಿಗೆ ಅಲ್ಲ ಎಂದೂ ಹೇಳಿದೆ.

Similar News