ಮಂಡ್ಯ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ

Update: 2022-11-21 13:39 GMT

ಮಂಡ್ಯ, ನ.21: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನೋರ್ವನನ್ನು ಹತ್ಯೆಗೈದಿರುವ ಘಟನೆ ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅರುಣ್  (23) ಎಂಬಾತನೇ ಹತ್ಯೆಯಾದ ಯುವಕನಾಗಿದ್ದು, ಅದೇ ಗ್ರಾಮದ ದೊಡ್ಡಯ್ಯ (25), ದೇವರಾಜು (26) ಎಂಬುವರೇ ಹತ್ಯೆಗೈದ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಅರುಣ ಹಾಗೂ ದೊಡ್ಡಯ್ಯ, ದೇವರಾಜು ಅವರ ನಡುವೆ ರವಿವಾರ ಸಂಜೆ ಗ್ರಾಮದಲ್ಲಿ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ದೇವರಾಜು ಮತ್ತು ದೊಡ್ಡಯ್ಯ ಅರುಣನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದಾಗಿ ಅರುಣನ ಮುಖ, ಕೈಕಾಲುಗಳಿಗೆ ಗಾಯಗಳಾಗಿದ್ದವು. ಮೂಗಿನಿಂದ ರಕ್ತ ಸೋರುತ್ತಿತ್ತು. ಬಳಿಕ ಆತ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಬೈಕ್‍ನಲ್ಲಿ ಹೋಗುತ್ತಿದ್ದ ಎನ್ನಲಾಗಿದೆ.

ಬೈಕ್‍ನಲ್ಲಿ ಹೋಗುತ್ತಿದ್ದ ಅರುಣನನ್ನು ಹಿಂಬಾಲಿಸಿದ ದೊಡ್ಡಯ್ಯ ಹಾಗೂ ದೇವರಾಜು, ಮತ್ತೆ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ರಸ್ತೆಯಲ್ಲಿ ಬಿದ್ದಿದ್ದ ಅರುಣನನ್ನು ಸಾರ್ವಜನಿಕರು ಕೆ.ಎಂ.ದೊಡ್ಡಿ ಮಾದೇಗೌಡ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Similar News