ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ತಂಡ

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಸರಕಾರದ ವಿರುದ್ಧ ಪ್ರತಿಭಟನೆ

Update: 2022-11-21 18:43 GMT

ದೋಹಾ, ನ. 21: ಖತರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್(FIFA World Cup) ನ ತಮ್ಮ ಮೊದಲ ಪಂದ್ಯಕ್ಕೆ ಮುನ್ನ ಸೋಮವಾರ ಇರಾನ್ ಫುಟ್ಬಾಲ್ ತಂಡದ ಆಟಗಾರರು ತಮ್ಮ ರಾಷ್ಟ್ರಗೀತೆಯನ್ನು ಹಾಡಲಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಈ ಘಟನೆ ನಡೆಯಿತು.

ಇರಾನ್ ನಲ್ಲಿ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಫುಟ್ಬಾಲ್ ಆಟಗಾರರು ಈ ರೀತಿಯಾಗಿ ಬೆಂಬಲ ನೀಡಿದ್ದಾರೆ ಎಂಬುದಾಗಿ ಭಾವಿಸಲಾಗಿದೆ.

ಇರಾನ್ ನಲ್ಲಿ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಬೆಂಬಲಾರ್ಥವಾಗಿ ರಾಷ್ಟ್ರಗೀತೆ ಯನ್ನು ಹಾಡಲು ನಿರಾಕರಿಸಬೇಕೇ ಎನ್ನುವ ಬಗ್ಗೆ ತಂಡವು ಜೊತೆಯಾಗಿ ನಿರ್ಧಾರವೊಂದನ್ನು ತೆಗೆದುಕೊಳ್ಳುವುದು ಎಂಬುದಾಗಿ ಪಂದ್ಯಕ್ಕೆ ಮುನ್ನ ಇರಾನ್ ತಂಡದ ನಾಯಕ ಅಲಿರೇಝ ಜಹಾನ್ಬಕ್ಷ್ ಹೇಳಿದರು.


ಬಳಿಕ, ಪಂದ್ಯಕ್ಕೆ ಮುನ್ನ ದೋಹಾದ ಖಲೀಫ ಇಂಟರ್ನ್ಯಾಶನಲ್ ಸ್ಟೇಡಿಯಮ್(Khalifa International Stadium) ನಲ್ಲಿ ಇರಾನ್ ದೇಶದ ರಾಷ್ಟ್ರಗೀತೆ ಮೊಳಗಿದಾಗ ಇರಾನ್ ಆಟಗಾರರು ಮುಖ ಗಂಟಿಕ್ಕಿಕೊಂಡು ಸುಮ್ಮನೆ ನಿಂತರು.

ಹಿಜಾಬ್ ಸರಿಯಾಗಿ ಧರಿಸಿಲ್ಲ ಎನ್ನುವ ಕಾರಣಕ್ಕಾಗಿ ಇರಾನ್ನ ನೈತಿಕ ಪೊಲೀಸರಿಂದ ಸೆಪ್ಟಂಬರ್ 16ರಂದು ಬಂಧನಕ್ಕೊಳಗಾಗಿದ್ದ 22 ವರ್ಷದ ಯುವತಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಈ ಸಾವನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಪ್ರತಿಭಟನಾಕಾರರ ವಿರುದ್ಧ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಈವರೆಗೆ ಸುಮಾರು 400 ಮಂದಿ ಮೃತಪಟ್ಟಿದ್ದಾರೆ ಎಂದು ‘ಇರಾನ್ ಹ್ಯೂಮನ್ರೈಟ್ಸ್’ ("Iranian Human Rights")ಎಂಬ ಸಂಘಟನೆ ಹೇಳಿದೆ.

Similar News