ಮತದಾರರ ಮಾಹಿತಿ ಕದ್ದ ಪ್ರಕರಣ: ಮೂವರು ಆರ್ ಒಗಳ ಅಮಾನತು

Update: 2022-11-21 18:17 GMT

ಬೆಂಗಳೂರು, ನ. 21: ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಬಿಬಿಎಂಪಿ ವ್ಯಾಪ್ತಿಯ ಮೂವರು ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. 

ಸೋಮವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, ‘ಮತದಾರರ ಮಾಹಿತಿ ಕಳವು ಆರೋಪ ಪ್ರಕರಣ ಸಂಬಂಧ ನಾವು ತನಿಖೆ ನಡೆಸಿದ ವರದಿ ಕೈಸೇರಿದ್ದು, ಇದರನ್ವಯ ಕರ್ತವ್ಯ ಲೋಕವೆಸಗಿರುವ ಆರೋಪದಡಿ ಇಲ್ಲಿನ ಚಿಕ್ಕಪೇಟೆ ಆರ್ ಒ ಭೀಮಶಂಕರ್, ಮಹಾದೇವಪುರ ಆರ್.ಚಂದ್ರಶೇಖರ್, ಶಿವಾಜಿನಗರ ಸುಹೈಲ್ ಅಹ್ಮದ್ ಅವರನ್ನು ಅಮಾನತು ಮಾಡಲಾಗಿದೆ’ ಎಂದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದೊಂದು ಸೇರಿದಂತೆ ನಾಲ್ಕು ತಂಡ ರಚನೆ ಮಾಡಲಾಗಿತ್ತು. ಜತೆಗೆ, ಅಪರ ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಸದ್ಯ ತನಿಖೆಯ ವರದಿ ಬಿಬಿಎಂಪಿ ಕೈ ಸೇರಿದ್ದು, ಈ ಸಂಬಂಧ ಕರ್ತವ್ಯಲೋಪ ಹಿನ್ನೆಲೆ ಆರ್‍ಒಗಳನ್ನು ಅಮಾನತು ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಮತದಾರರ ಮಾಹಿತಿ ಕದ್ದ ಆರೋಪ ಪ್ರಕರಣ: 'ಚಿಲುಮೆ' ಮುಖ್ಯಸ್ಥ‌ ರವಿಕುಮಾರ್‌ ಬಂಧನ

ಮುಖ್ಯಸ್ಥ ಸೆರೆ: ಈ ನಡುವೆ ‘ಚೆಲುಮೆ’ ಶೈಕ್ಷಣಿಕ ಮತ್ತು ಗ್ರಾಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಎಂಬವನನ್ನೂ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

ಇಲ್ಲಿನ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮಾರಿಸಿಕೊಂಡಿದ್ದ ರವಿಕುಮಾರ್ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ತಡರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ರವಿಕುಮಾರ್ ಪತ್ನಿ ಐಶ್ವರ್ಯಾ ಹಾಗೂ ಪೋಷಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.

ಮತ್ತೊಂದೆಡೆ, ಚಿಲುಮೆ ಸಂಸ್ಥೆಯನ್ನು ಯಾವಾಗ, ಯಾವ ಉದ್ದೇಶಕ್ಕಾಗಿ ಸ್ಥಾಪಿಸಲಾಗಿದೆ. ಇದರ ಕಾರ್ಯವೈಖರಿ ಏನು? ಎಷ್ಟು ಮಂದಿ ನಿರ್ದೇಶಕರು ಹಾಗೂ ಸಿಬ್ಬಂದಿ ಇದ್ದಾರೆ? ಅವರುಗಳ ಕೆಲಸವೇನು? ಈ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ಕೊಡಿಸಿದವರು ಯಾರು? ಯಾವ ಯಾವ ಮಾಹಿತಿಗಳನ್ನು ಸಂಗ್ರಹಿಸಿದ್ದೀರಿ? ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಆರೋಪಿಗೆ ತನಿಖಾಧಿಕಾರಿಗಳು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ, ಪ್ರಕರಣದ ಪ್ರಮುಖ ರೂವಾರಿ ಆದ ಈತನ ವಿಚಾರಣೆಯಿಂದ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಇದೇ ಪ್ರಕರಣದಲ್ಲಿ ಈಗಾಗಲೇ ಸಂಸ್ಥೆಯ ಉದ್ಯೋಗಿಗಳಾದ ರೇಣುಕಾಪ್ರಸಾದ್, ಧರ್ಮೇಶ್, ನಿರ್ದೇಶಕ ಕೆಂಪೇಗೌಡ, ಪ್ರಜ್ವಲ್ ಎಂಬುವವರನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಮತದಾರರ ಮಾಹಿತಿ ಕದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಚಿಲುಮೆ ಸಂಸ್ಥೆ ಅಕ್ರಮಗಳು ಒಂದೊಂದಾಗಿಯೇ ಹೊರಬರುತ್ತಿದ್ದು, ಪೊಲೀಸರು ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.

Similar News