ಮತದಾರರ ಮಾಹಿತಿ ಕದ್ದ ಆರೋಪ ಪ್ರಕರಣ: 'ಚಿಲುಮೆ' ಮುಖ್ಯಸ್ಥ ರವಿಕುಮಾರ್ ಬಂಧನ
ಬೆಂಗಳೂರು, ನ.21: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿ 'ಚಿಲುಮೆ' ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ನನ್ನು ಲಾಲ್ ಬಾಗ್ ಬಳಿ ಹಲಸೂರು ಗೇಟ್ ಪೊಲೀಸರು ರವಿವಾರ ರಾತ್ರಿ ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದ ರವಿಕುಮಾರ್ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ರವಿಕುಮಾರ್ ತಲೆಮರೆಸಿಕೊಂಡಿದ್ದರಿಂದ ಅವರ ಪತ್ನಿ ಐಶ್ವರ್ಯಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ರವಿಕುಮಾರ್ ಮುಖ್ಯ ಸೂತ್ರಧಾರಿ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಚಿಲುಮೆ ಸಂಸ್ಥೆಯ ಸಿಬ್ಬಂದಿಯಾದ ಧರ್ಮೇಶ್, ರೇಣುಕಾ ಪ್ರಸಾದ್, ರವಿಕುಮಾರ್ ಸಹೋದರ ಮತ್ತು ಸಂಸ್ಥೆಯ ಮೇಲ್ವಿಚಾರಕನಾಗಿರುವ ಕೆಂಪೇಗೌಡ, ಇ-ಪ್ರಕ್ಯೂರ್ಮೆಂಟ್ ಮೇಲ್ವಿಚಾರಕ ಪ್ರಜ್ವಲ್ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು.
Next Story