ಬ್ರಾಹ್ಮಣ ಸಮುದಾಯ ಎತ್ತಿಕಟ್ಟಿ ಪ್ರತಿಭಟನೆ: ವಿವಿಧ ಸಂಘಟನೆಗಳಿಂದ ಖಂಡನೆ

Update: 2022-11-22 17:37 GMT

ಬೆಂಗಳೂರು, ನ.22: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ, ವಿಚಾರಗಳನ್ನು ತಿಳಿಸಲು ಅವಕಾಶವಿದೆ. ಅದೇ ರೀತಿಯಾಗಿ ಸಮಾಜವಾದಿ ಚಿಂತಕ ಪ.ಮಲ್ಲೇಶ್ ಅವರು ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣ್ಯವನ್ನು ನಂಬಬೇಡಿ ಎಂದೂ ಹೇಳಿದರೂ ನಂತರ ಈ ಹೇಳಿಕೆಗಾಗಿ ವಿಷಾದವನ್ನೂ ಸೂಚಿಸಿದ್ದಾರೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳದ ಕೆಲವರು ಬ್ರಾಹ್ಮಣ ಸಮುದಾಯವನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸಿರುವುದನ್ನು ಮೈಸೂರಿನ ಸಿಪಿಐ(ಎಂ) ಮುಖಂಡ ಜಗನ್ನಾಥ್ ಸೇರಿದಂತೆ ಹಲವರು ಖಂಡಿಸಿದ್ದಾರೆ.  

ಸಾವಿರಾರು ವರ್ಷಗಳಿಂದ ನೋವು, ಅಪಮಾನ ಅನುಭವಿಸುತ್ತ ಧ್ವನಿ ಎತ್ತದೆ ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡು ಬಂದಿರುವ ತಳ ಸಮುದಾಯಗಳು ಇತ್ತೀಚಿನ ವರ್ಷಗಳಲ್ಲಿ ಪ್ರಜಾಪ್ರಭುತ್ವದ ಅಡಿಯಲ್ಲಿ ಅರಿವನ್ನು ಪಡೆದುಕೊಳ್ಳುತ್ತಿವೆ. ಇದೇ ಪ್ರಜಾಪ್ರಭುತ್ವದ ಹಕ್ಕಿನ ಅಡಿಯಲ್ಲಿ ಪ.ಮಲ್ಲೇಶ್ ಅವರು ಕೋಪದಲ್ಲಿ ಒಂದು ಮಾತನ್ನು ಆಡಿದ್ದಾರೆ, ನಂತರ ಆ ಹೇಳಿಕೆಗೆ ವಿಷಾದವನ್ನು ಸೂಚಿಸಿದ್ದಾರೆ ಎಂದು ಸಿಪಿಐ(ಎಂ) ಮುಖಂಡರು ಸೇರಿ ಹಲವರು ಪ್ರಕಟನೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. 

ಇಲ್ಲಿ ಪ.ಮಲ್ಲೇಶ್ ಅವರಾಗಲಿ, ಅವರಾಡಿದ ಮಾತುಗಳಾಗಲೀ ಮುಖ್ಯವಾಗಬೇಕಾಗಿಲ್ಲ. ವರ್ಣವ್ಯವಸ್ಥೆಯನ್ನು ಒಪ್ಪಿಕೊಂಡ ಗಾಂಧೀಜಿಗೆ ಈ ಜಾತಿ ವ್ಯವಸ್ಥೆಯ ಘೋರ ತಿಳಿದಿತ್ತು. ಹೀಗಾಗಿಯೇ ಅವರು ಹರಿಜನ ಕಲ್ಯಾಣವನ್ನೇ ತಮ್ಮ ಬದುಕಿನ ಪರಮ ಆದರ್ಶ ಎಂದು ಪರಿಭಾವಿಸಿದ್ದರು. ಸಮಾಜವಾದಿ ಚಿಂತಕರಾದ ಡಾ.ಲೋಹಿಯಾ ಅವರು ಆಡುತ್ತಿದ್ದ ಮಾತುಗಳೆಲ್ಲ ಈ ಬ್ರಾಹ್ಮಣ್ಯದ ವಿರುದ್ಧವೇ ಇದ್ದವು ಎಂದು ಎಐಯುಟಿಯುಸಿ, ಸಿಪಿಐ(ಎಂ) ಸೇರಿ ಹಲವರು ಮುಖಂಡರು  ಉಲ್ಲೇಖಿಸಿದ್ದಾರೆ.              

Similar News