ಅಮೆರಿಕ ಪ್ರವಾಸಿ ವೀಸಾ: ಬಾರತೀಯರು ರಾಯಭಾರಿ ಕಚೇರಿ ಅಪಾಯಿಂಟ್‌ಮೆಂಟ್‌ಗೆ 900ಕ್ಕೂ ಅಧಿಕ ದಿನ ಕಾಯಬೇಕು

Update: 2022-11-23 17:47 GMT

ಹೊಸದಿಲ್ಲಿ,ನ.21: ಪ್ರವಾಸಿ ವೀಸಾದಡಿ ಅಮೆರಿಕಕ್ಕೆ ಭೇಟಿ ನೀಡಲು ಬಯಸುವ ಭಾರತೀಯರು ರಾಯಭಾರಿ ಕಚೇರಿಯಿಂದ ಅಪಾಯಿಂಟ್‌ಮೆಂಟ್‌ಗಾಗಿ ಕಾಯಬೇಕಾದ ಅವಧಿಯು ಕಳೆದ ಮೂರು ವರ್ಷಗಳಲ್ಲಿ 900ಕ್ಕೂ ಅಧಿಕ ದಿನಗಳನ್ನು ದಾಟಿದೆ.

ಅಮೆರಿಕಕ್ಕೆ ಭೇಟಿ ನೀಡುವವರು B1 (ಔದ್ಯಮಿಕ) ಅಥವಾB2 (ಪ್ರವಾಸಿ) ಶ್ರೇಣಿಯ ವೀಸಾವನ್ನು ಪಡೆಯಬಯಸುವವರು ಇಷ್ಟೊಂದು ದೀರ್ಘ ಸಮಯ ಕಾಯಬೇಕಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವೆಬ್‌ಸೈಟ್ ವರದಿಯೊಂದು ತಿಳಿಸಿದೆ.

ವೀಸಾ ಅಪಾಯಿಂಟ್‌ಮೆಂಟ್‌ಗಾಗಿ ಹೊಸದಿಲ್ಲಿಯ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಕಾಯಬೇಕಾದ ಅವಧಿ 961 ದಿನಗಳಾಗಿವೆ. ಮುಂಬೈನಲ್ಲಿರುವ ಅಮೆರಿಕ ಕಾನ್ಸುಲೇಟ್‌ನಲ್ಲಿ  999 ದಿನಗಳು, ಹೈದರಾಬಾದ್‌ನ ಅಮೆರಿಕ ಕಾನ್ಸುಲೇಟ್‌ನಲ್ಲಿ 994 ದಿನಗಳವರೆಗೆ ಕಾಯಬೇಕಾಗುತ್ತದೆ. B1 ಹಾಗೂ  B2 ಶ್ರೇಣಿಯ ವೀಸಾಕ್ಕಾಗಿ ಚೆನ್ನೈಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯಲ್ಲಿ 948 ದಿನಗಳು ಹಾಗೂ ಕೇರಳದಲ್ಲಿ 904 ದಿನಗಳವರೆಗೆ ಕಾಯಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

ಅಮೆರಿಕದ ಕಾನೂನಿನ ಪ್ರಕಾರ  ಆ ದೇಶದ ವೀಸಾಕ್ಕಾಗಿ ಅರ್ಜಿಸಲ್ಲಿಸುವವರು  ವೈಯಕ್ತಿಕವಾಗಿ ರಾಯಭಾರಿ ಕಚೇರಿಗೆ ಹಾಜರಾಗಬೇಕಾಗುತ್ತದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಕೊರೋನ ಹಾವಳಿಯಿಂದಾಗಿ ಅದು ಸಾಧ್ಯವಾಗಿರಲಿಲಲ. ಇದರಿಂದಾಗಿ ವೀಸಾ ಅರ್ಜಿಗಳು ಇತ್ಯರ್ಥವಾಗದೆ ಬಾಕಿಯಿದ್ದುದರಿಂದ, ಅಪಾಯಿಂಟ್‌ಮೆಂಟ್‌ಗಾಗಿ ನಿರೀಕ್ಷೆಯ ಅವಧಿಯು  ಅಧಿಕಗೊಂಡಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವೆಬ್‌ಸೈಟ್ ವರದಿ ತಿಳಿಸಿದೆ.

Similar News