​ಟರ್ಕಿಯಲ್ಲಿ ಭೂಕಂಪ: 68 ಮಂದಿಗೆ ಗಾಯ

Update: 2022-11-23 17:57 GMT

ಅಂಕಾರ, ನ.23: ವಾಯವ್ಯ ಟರ್ಕಿ(Turkey)ಯಲ್ಲಿ ಬುಧವಾರ ಸಂಭವಿಸಿದ 5.9 ತೀವ್ರತೆಯ ಭೂಕಂಪದಿಂದ ಕನಿಷ್ಟ 68 ಮಂದಿ ಗಾಯಗೊಂಡಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. 


ಇಸ್ತಾನ್ಬುಲ್ನ ಪೂರ್ವದಲ್ಲಿರುವ ಡ್ಯೂಸ್ ಪ್ರಾಂತದ ಗೊಲ್ಕಾಯ ನಗರದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ವಿಪತ್ತು ಮತ್ತು ತುರ್ತುಪರಿಸ್ಥಿತಿ ನಿರ್ವಹಣಾ ಸಂಸ್ಥೆ ಹೇಳಿದೆ. ಬುಧವಾರ ಬೆಳಿಗ್ಗೆ ಭೂಮಿ ನಡುಗಿದಾಗ ನಿದ್ದೆಯಲ್ಲಿದ್ದ ಜನತೆ ಆತಂಕದಿಂದ ಹೊರಗೋಡಿ ಬಂದರು. ಮನೆಯ ಮಹಡಿಯಲ್ಲಿದ್ದವರು ಕಿಟಕಿಯಿಂದ ನೆಲಕ್ಕೆ ಧುಮುಕಿದಾಗ ಗಾಯಗೊಂಡಿದ್ದಾರೆ. 

ಅಫ್ಘಾನ್ ಪ್ರಜೆಯೊಬ್ಬನ ತಲೆಗೆ ಬಲವಾದ ಏಟು ಬಿದ್ದಿದೆ.  ಪ್ರಬಲ ಭೂಕಂಪದಿಂದಾಗಿ ದೂರದ ಇಸ್ತಾನ್ಬುಲ್, ರಾಜಧಾನಿ ಅಂಕಾರದಲ್ಲೂ ಭೂಮಿ ಕಂಪಿಸಿದೆ. ಅಂಕಾರದಲ್ಲಿ 4.3 ತೀವ್ರತೆಯ ಪಶ್ಚಾತ್ ಕಂಪನವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಲಯದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ  ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೊಕ ಹೇಳಿದ್ದಾರೆ.


ಮಸೀದಿ, ಶಾಪಿಂಗ್ ಸೆಂಟರ್ ಸಹಿತ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಗಂಭೀರ ಪ್ರಮಾಣದಲ್ಲಿ ನಾಶ-ನಷ್ಟ ಸಂಭವಿಸಿಲ್ಲ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯೀಪ್ (Recipe Tayyip)ಎರ್ಡೋಗನ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Similar News