ನಾಲ್ವರನ್ನು ಕೊಂದ ಚಿರತೆಗೆ ಜೀವಾವಧಿ ಬಂಧನ ಶಿಕ್ಷೆ!

Update: 2022-11-24 02:39 GMT

ಪಿಲಿಭಿಟ್; ಆಗಸ್ಟ್ 23ರಿಂದ ಅಕ್ಟೋಬರ್ 20ರ ನಡುವೆ ಲಖೀಂಪುರಿ ಜಿಲ್ಲೆಯ ಗೋಲಾ ತಹಸೀಲ್‍ನ ಸರ್ಕಾರಿ ಕೃಷಿ ಕ್ಷೇತ್ರದ ನಾಲ್ಕು ಮಂದಿ ರಕ್ಷಕರನ್ನು ಕೊಂದಿದ್ದ ಗಂಡು ಚಿರತೆಯನ್ನು ನಿಗಾ ಇಡುವ ಸಲುವಾಗಿ ಜೀವಿತಾವಧಿಯುದ್ದಕ್ಕೂ ಬಂಧನದಲ್ಲಿ ಇಡಲು ಗುರುವಾರ ಕಾನ್ಪುರ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ.

ದಕ್ಷಿಣ ಖೇರಿ ಅರಣ್ಯ ವಿಭಾಗದ ಸಿಬ್ಬಂದಿ ಸತತ ಎರಡು ತಿಂಗಳ ಕಾಲ ನಡೆಸಿದ ಕಾರ್ಯಾಚರಣೆಗೆ ಸೋಮವಾರ ಫಲ ಸಿಕ್ಕಿದ್ದು, ಎಂಟು ವರ್ಷದ ಈ ಗಂಡುಚಿರತೆ ಸೋಮವಾರ ಬೋನಿಗೆ ಬಿದ್ದಿದೆ.

"ಚಿರತೆ ಬಲಿಷ್ಠವಾಗಿದ್ದು, ಯಾವುದೇ ದೈಹಿಕ ಗಾಯಗಳಿಲ್ಲ. ಗಾಯಗೊಂಡ ಅಥವಾ ತೀರಾ ದುರ್ಬಲ ಚಿರತೆಗಳು ಸಾಮಾನ್ಯವಾಗಿ ಮನುಷ್ಯರನ್ನು ಬೇಟೆ ಮಾಡುತ್ತವೆ. ಉತ್ತಮ ಆರೋಗ್ಯವಿದ್ದರೂ, ಮನುಷ್ಯಬೇಟೆಯ ಪ್ರವೃತ್ತಿ ಹೊಂದಿದ ಚಿರತೆಯನ್ನು ಇನ್ನೊಂದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಬದಲು ಮೃಗಾಲಯಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು" ಎಂದು ಡಿಎಫ್‍ಓ ಸಂಜಯ್ ಬಿಸ್ವಾಲ್ ಹೇಳಿದ್ದಾರೆ.

ಚಿರತೆಯನ್ನು ಸ್ಥಳಾಂತರಿಸಲು ಉತ್ತರ ಪ್ರದೇಶದ ಮುಖ್ಯ ವನ್ಯಜೀವಿ ವಾರ್ಡನ್ ಅವರಿಂದ ಅನುಮತಿ ಸಿಕ್ಕಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಖೇರಿ ಅರಣ್ಯ ವಿಭಾಗ ಪ್ರದೇಶದ ಗೋಲಾ ಅರಣ್ಯದಿಂದ ಏಳು ಕಿಲೋಮೀಟರ್ ದೂರದ ಜಮುನಾಬಾದ್ ಎಂಬಲ್ಲಿನ ಹೊಲದಲ್ಲಿ ಚಿರತೆ ವಾಸವಿತ್ತು ಎಂದು ಡಿಎಫ್‍ಓ ವಿವರಿಸಿದ್ದಾರೆ.

ಇದರ ಚಲನ ವಲನಗಳ ಮೇಲೆ ನಿಗಾ ಇಡಲು 25 ಸಿಸಿ ಟಿವಿ ಅಳವಡಿಸಿದ್ದಲ್ಲದೇ ಆರು ಬೋನುಗಳನ್ನು ಇಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಮತ್ತು ಹೆಜ್ಜೆ ಗುರುತಿನ ಆಧಾರದಲ್ಲಿ ನಾಲ್ವರು ಗಾರ್ಡ್‍ಗಳನ್ನು ಕೊಂದ ಚಿರತೆ ಇದೇ ಎಂದು ದೃಢಪಡಿಸಲಾಗಿದೆ ಎಂದಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News