ತಮ್ಮದೇ ಪಕ್ಷದ ದಲಿತ ಶಾಸಕರ ಮೇಲೆ ಹಲ್ಲೆ ನಡೆದರೂ ಗೃಹ ಸಚಿವರು ಮಾತಾಡ್ತಿಲ್ಲ ಏಕೆ?: ಕಾಂಗ್ರೆಸ್ ಪ್ರಶ್ನೆ

Update: 2022-11-24 10:39 GMT

ಬೆಂಗಳೂರು, ನ.24: ''ತಮ್ಮದೇ ಪಕ್ಷದ ದಲಿತ ಶಾಸಕರೊಬ್ಬರ ಮೇಲೆ ಹಲ್ಲೆಯಾಗಿದೆ. ಎಂ.ಪಿ ಕುಮಾರಸ್ವಾಮಿ ಪ್ರತಿ ದಿನವೂ ಆ ಬಗ್ಗೆ ಗೋಳಾಡುತ್ತಿದ್ದಾರೆ. ಆದರೆ ಯಾವೊಬ್ಬ ಬಿಜೆಪಿಗರೂ ಬಹಿರಂಗವಾಗಿ ಒಂದೇ ಒಂದು ಮಾತನ್ನಾಡಿಲ್ಲ'' ಎಂದು ಕಾಂಗ್ರೆಸ್ ಹೇಳಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, '' ಗೃಹಸಚಿವರು ಶಾಸಕರನ್ನು ಮಾತಾಡಿಸಿಲ್ಲ, ತಮ್ಮ ಇಲಾಖೆಯ ವೈಫಲ್ಯಕ್ಕೆ ಕ್ಷಮೆ ಕೇಳಿಲ್ಲ, ದಲಿತರಿಗೆ ಕನಿಷ್ಠ ಬೆಲೆಯನ್ನೂ ಬಿಜೆಪಿ ನೀಡುವುದಿಲ್ಲ'' ಎಂದು ಆರೋಪಿಸಿದೆ. 

''ಗೃಹ ಇಲಾಖೆಯ ಭ್ರಷ್ಟಚಾರದ ಬಗ್ಗೆ ಬಿಜೆಪಿ ಶಾಸಕರೇ ಹೇಳಿದ್ದಾರೆ, ಹಣ ಪಡೆದು ಬೇಕಾಬಿಟ್ಟಿ ಪೋಸ್ಟಿಂಗ್ ಮಾಡಲಾಗುತ್ತದೆ ಎಂದೂ ಹೇಳಿದ್ದಾರೆ. ಶಾಸಕರು ಹೇಳುವ ಭ್ರಷ್ಟಾಚಾರದ ವಿಚಾರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅವರ ಪಾತ್ರವಿದೆಯೇ? ಹಾಗಾಗಿಯೇ ಮೌನವಾಗಿದ್ದಾರಾ? ಆಡಳಿತ ಪಕ್ಷದ ದಲಿತ ಶಾಸಕರು ಇಷ್ಟು ಗೋಳಾಡಿದರೂ ಬಿಜೆಪಿ ಮಾತಾಡ್ತಿಲ್ಲ ಏಕೆ?'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಹಿನ್ನೆಲೆ: ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ಹುಲ್ಲಮನೆ ಗ್ರಾಮದಲ್ಲಿ ರವಿವಾರ ಬೆಳಗ್ಗೆ 7:30ರ ಸುಮಾರಿಗೆ ಕಾಡಾನೆ ದಾಳಿ ನಡೆಸಿದ್ದರಿಂದ ಶೋಭಾ(45) ಎಂಬವರು ಮೃತಪಟ್ಟಿದ್ದರು. ಬಳಿಕ ಗ್ರಾಮಸ್ಥರು ದಿನವಿಡೀ ಮಹಿಳೆಯ ಮೃತದೇಹವನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ಸಂಜೆ ಆರು ಗಂಟೆಯ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದ್ದರು. ಬೆಳಗ್ಗೆ ಘಟನೆ ನಡೆದಿದ್ದರೂ ಸ್ಥಳಕ್ಕೆ ಆಗಮಿಸುವಲ್ಲಿ ಶಾಸಕರು ವಿಳಂಬಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಶಾಸಕರಿಗೆ ಘೇರಾವ್ ಹಾಕಿ ಅಟ್ಟಾಡಿಸಿ ಹಲ್ಲೆ ನಡೆಸಿ, ಶಾಸಕರು ಧರಿಸಿದ್ದ ಬಟ್ಟೆಗಳನ್ನು ಹಿಡಿದು ಜಗ್ಗಿ ಹರಿದಿದ್ದರು ಎಂದು ಆರೋಪಿಸಲಾಗಿತ್ತು. 

ಇದನ್ನೂ ಓದಿ: ಇದುವರೆಗೂ ಒಂದು ಪೋನ್ ಮಾಡಿ ಏನಾಯ್ತು ಅಂತ ಕೇಳಿಲ್ಲ: ಗೃಹ ಸಚಿವರ ವಿರುದ್ಧ BJP ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ

Similar News