ತನ್ನ ವಿಸಾಗಾಗಿ ಪಾಕಿಸ್ತಾನಿ ವ್ಯಕ್ತಿ ಹಾಕಿದ್ದ ಅರ್ಜಿ ತಿರಸ್ಕರಿಸಿದ ಕೋರ್ಟ್: ಶಿಹಾಬ್ ಚೊಟ್ಟೂರ್ ಸ್ಪಷ್ಟನೆ

ಕಾಲ್ನಡಿಗೆ ಮೂಲಕ ಹಜ್

Update: 2022-11-24 18:56 GMT

ಲಾಹೋರ್/ಹೊಸದಿಲ್ಲಿ: ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳಿದ್ದ ಶಿಹಾಬ್ ಚೊಟ್ಟೂರು ಅವರಿಗೆ ಪಾಕಿಸ್ತಾನದ ಮೂಲಕ ತನ್ನ ಯಾತ್ರೆಯನ್ನು ಮುಂದುವರೆಸಲು ಪಾಕಿಸ್ತಾನ ವಿಸಾ ನಿರಾಕರಿಸಿದೆ ಎಂದು ವರದಿಯಾಗಿದೆ.

ಕಾಲ್ನಡಿಗೆಯಲ್ಲಿ ಹಜ್‌ಗೆ ತೆರಳುವಂತೆ ಪಾಕ್ ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ ಎಂಬ ವರದಿಯನ್ನು ಶಿಹಾಬ್ ನಿರಾಕರಿಸಿದ್ದು, ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಖಾತೆ ಮೂಲಕ ಪ್ರತಿಕ್ರಿಯೆ ನೀಡಿರುವ ಶಿಹಾಬ್ ಚೊಟ್ಟೂರು, "ವಿಸಾಗಾಗಿ ನಾನು ಯಾವುದೇ ಅರ್ಜಿ ಹಾಕಿಲ್ಲ. ಬದಲಾಗಿ ಪಾಕಿಸ್ತಾನದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದನ್ನೇ ತಿರುಚಿ ನನಗೆ ವಿಸಾ ನಿರಾಕರಿಸಲಾಗಿದೆ ಎಂದು ಸುದ್ದಿ ತಿರುಚಲಾಗಿದೆ. ನನ್ನ ಮುಂದಿನ ಪ್ರಯಾಣ ಶೀಘ್ರದಲ್ಲೇ ಮುಂದುವರೆಯಲಿದೆ" ಎಂದು ಹೇಳಿದ್ದಾರೆ.

ಶಿಹಾಬ್ ಚೊಟ್ಟೂರು ಅವರು ಹಜ್ ಯಾತ್ರೆಗಾಗಿ ಪಾಕಿಸ್ತಾನದ ಮೂಲಕ ಕಾಲ್ನಡಿಗೆಯಲ್ಲಿ ಸೌದಿ ಅರೇಬಿಯಾಕ್ಕೆ ತೆರಳಲು ಬಯಸಿದ್ದರು. ಕೇರಳದ ನಿವಾಸಿ ಶಿಹಾಬ್ ಕೇರಳದಿಂದ  ಕಾಲ್ನಡಿಗೆಯಲ್ಲಿ ಹೊರಟಿದ್ದು, ಕಳೆದ ತಿಂಗಳು, ಅವರು ವಾಘಾ ಗಡಿಯನ್ನು ತಲುಪಿದ್ದರು. 

ಶಿಹಾಬ್‌ ವೀಸಾಗಾಗಿ ಅರ್ಜಿ ಸಲ್ಲಿಸಿದ್ದ ಪಾಕಿಸ್ತಾನಿ ವ್ಯಕ್ತಿ

ಬುಧವಾರ, ಲಾಹೋರ್ ಹೈಕೋರ್ಟ್ ಪೀಠವು ಶಿಹಾಬ್ ಪರವಾಗಿ ಸ್ಥಳೀಯ ನಾಗರಿಕ ಸರ್ವರ್ ತಾಜ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ. ಅರ್ಜಿ ಸಲ್ಲಿಸುವ ವ್ಯಕ್ತಿಗೆ ಭಾರತೀಯ ಪ್ರಜೆಯೊಂದಿಗೆ ಯಾವುದೇ ಸಂಬಂಧವಿಲ್ಲ, ಅಥವಾ ನ್ಯಾಯಾಲಯವನ್ನು ಸಂಪರ್ಕಿಸುವ ಅಧಿಕಾರವನ್ನೂ ಹೊಂದಿಲ್ಲ ಎಂದು ಪೀಠ ಹೇಳಿದೆ. ನ್ಯಾಯಾಲಯವು "ಭಾರತೀಯ ಪ್ರಜೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು" ಕೇಳಿದ್ದು, ಅರ್ಜಿದಾರರು ಅದನ್ನು ಒದಗಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಬಳಿಯ ಶಿಹಾಬ್ ಚೊಟ್ಟೂರು ಅವರು ಭಾರತ, ಪಾಕಿಸ್ತಾನ, ಇರಾಕ್, ಇರಾನ್, ಕುವೈತ್‌ನ ಹಲವಾರು ರಾಜ್ಯಗಳನ್ನು ದಾಟಿ ಸೌದಿ ಅರೇಬಿಯಾವನ್ನು ತಲುಪಬೇಕಾಗಿತ್ತು. ಅವರು 2023 ರ ಹಜ್‌ಗಾಗಿ ಈ ಪ್ರಯಾಣವನ್ನು ಮಾಡುತ್ತಿದ್ದಾರೆ.

Similar News