ತಪ್ಪಾಗಿ ಮಗ್ಗಿ ಹೇಳಿದ 5ನೇ ತರಗತಿ ವಿದ್ಯಾರ್ಥಿಗೆ ಡ್ರಿಲ್ಲಿಂಗ್ ಮೆಷಿನ್‍ನಿಂದ ಗಾಯಗೊಳಿಸಿದ ಶಿಕ್ಷಕ !

Update: 2022-11-26 02:46 GMT

ಲಕ್ನೋ: ಮಗ್ಗಿ ಕಲಿತಿಲ್ಲ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ಐದನೇ ತರಗತಿ ವಿದ್ಯಾರ್ಥಿಯೊಬ್ಬನ ಕೈಗೆ ಡ್ರಿಲ್ಲಿಂಗ್ ಮಿಷಿನ್ ಹಿಡಿದು ಗಾಯಗೊಳಿಸಿದ ಪ್ರಕರಣ ಕಾನ್ಪುರದ ಪ್ರೇಮ್‍ ನಗರ ಮೂಲ ಪ್ರಾಥಮಿಕ ಮಾದರಿ ಶಾಲೆಯಲ್ಲಿ ನಡೆದಿದೆ.

ಶಿಕ್ಷಕ 2 ಗುಣಕಗಳ ಮಗ್ಗಿ ಕೇಳಿದಾಗ ವಿದ್ಯಾರ್ಥಿ ಉತ್ತರಿಸಲು ಸಾಧ್ಯವಾಗದಿದ್ದಾಗ, ಬಾಲಕನ ಕೈಗೆ ಡ್ರಿಲ್ಲಿಂಗ್ ಮಿಷಿನ್ ಹಿಡಿದು ಶಿಕ್ಷೆ ನೀಡಿದ್ದಾಗಿ ವರದಿಯಾಗಿದೆ.

ಶುಕ್ರವಾರ ಗಾಯಾಳು ವಿದ್ಯಾರ್ಥಿಯ ಪೋಷಕರು ಶಾಲೆಯ ಮುಂದೆ ಧರಣಿ ನಡೆಸಿ, ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಮೂಲ ಶಿಕ್ಷಣ ಅಧಿಕಾರಿ, ಪೋಷಕರ ವಿರುದ್ಧವೇ ದೂರು ಹೊರಿಸಿ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಅಂತಿಮವಾಗಿ ಶಿಕ್ಷಕ ಅನೂಜ್ ಪಾಂಡೆ ಎಂಬಾತನನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ಪ್ರಕಟಿಸಿದರು. ಈ ಘಟನೆ ಬಗ್ಗೆ ತನಿಖೆ ನಡೆಸಲು ಮೂರು ಮಂದಿಯ ಸಮಿತಿ ರಚಿಸಲಾಗಿದೆ ಎಂದು ಬಿಎಸ್‍ಎ ಹೇಳಿದ್ದಾರೆ.

ವಿದ್ಯಾರ್ಥಿಗೆ ಉದ್ದೇಶಪೂರ್ವಕವಾಗಿ ಶಿಕ್ಷೆ ನೀಡಲಾಗಿದೆಯೇ ಅಥವಾ ಆಕಸ್ಮಿಕವಾಗಿ ಈ ಘಟನೆ ನಡೆದಿದೆಯೇ ಎಂಬ ಬಗ್ಗೆ ವಿವಿಧ ಆಯಾಮಗಳಿಂದ ಘಟನೆ ಬಗ್ಗೆ ಮೂವರು ಸದಸ್ಯರ ಸಮಿತಿ ತನಿಖೆ ನಡೆಸಲಿದೆ. ಜತೆಗೆ ಈ ಘಟನೆಯನ್ನು ಮುಚ್ಚಿಹಾಕುವಲ್ಲಿ ಇತರ ಶಿಕ್ಷಕರ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಂಬತ್ತು ವರ್ಷದ ವಿದ್ಯಾರ್ಥಿ ಶಾಲಾ ಗ್ರಂಥಾಲಯದ ಬಳಿ ಹಾದು ಹೋಗುತ್ತಿದ್ದಾಗ, ಖಾಸಗಿ ಸಂಸ್ಥೆಯಿಂದ ಎರವಲು ಪಡೆಯಲಾಗಿದ್ದ ಬೋಧಕ, ಕೈಯಲ್ಲಿ ಡ್ರಿಲ್ಲಿಂಗ್ ಮಿಷಿನ್ ಹಿಡಿದು ದುರಸ್ತಿ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದ. ಬಾಲಕನನ್ನು ನೋಡಿದಾಗ 2 ಗುಣಕದ ಮಗ್ಗಿ ಹೇಳುವಂತೆ ಬಾಲಕನಿಗೆ ಸೂಚಿಸಿದ. ಸರಿಯಾಗಿ ಹೇಳಲು ಬಾಲಕ ವಿಫಲವಾದಾಗ, ಡ್ರಿಲ್ಲಿಂಗ್ ಮಿಷಿನ್ ಹಿಡಿದು ವಿದ್ಯಾರ್ಥಿಯ ಕೈ ಗಾಯಗೊಳಿಸಿದ ಎಂದು ಸ್ಥಳೀಯ ಮೂಲಗಳು ಹೇಳಿವೆ. ಈ ಬಗ್ಗೆ newindianexpress.com ವರದಿ ಮಾಡಿದೆ. 

Similar News