ಫ್ಯಾಸಿಸ್ಟ್ ಸಂಸ್ಕೃತಿಯನ್ನು ಹರಡಲು ಸರಕಾರ ವಿಜ್ಞಾನ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ: ಎಸ್‍ಯುಸಿಐ

Update: 2022-11-27 12:40 GMT

ಬೆಂಗಳೂರು, ನ.27: ಕೇಂದ್ರದ ಬಿಜೆಪಿ ಸರಕಾರವು ತನ್ನ ಹಿಂದುತ್ವ ಕಾರ್ಯಸೂಚಿಯ ಭಾಗವಾಗಿ ಪ್ರತಿ ವರ್ಷದ ರಾಮನವಮಿಯಂದು ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳನ್ನು ಬಳಸಿಕೊಂಡು ಅಯೋಧ್ಯೆಯ ರಾಮನ ವಿಗ್ರಹದ ಮೇಲೆ ಸೂರ್ಯನ ಬೆಳಕನ್ನು ಹರಿಸಲು ಮುಂದಾದ ಕ್ರಮಕ್ಕೆ ವಿಜ್ಞಾನಿಗಳು ವಿರೋಧ ವ್ಯಕ್ತಪಡಿಸಿರುವುದನ್ನು ಎಸ್‍ಯುಸಿಐ ಸ್ವಾಗತಿಸಿದ್ದು, ಫ್ಯಾಸಿಸ್ಟ್ ಸಂಸ್ಕೃತಿಯನ್ನು ಹರಡುವ ನಿಟ್ಟಿನಲ್ಲಿ ಸರಕಾರ ವಿಜ್ಞಾನ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದಿದೆ.

ಈ ಕುರಿತು ಪ್ರಕಟಣೆ ನೀಡಿರುವ ಎಸ್‍ಯುಸಿಐ, ವಿಜ್ಞಾನವನ್ನು ಒಂದು ಮತಧರ್ಮಿಯರ ನಂಬಿಕೆಗೆ ದುರ್ಬಳಕೆ ಮಾಡಿಕೊಳ್ಳುವ ಬಿಜೆಪಿ ಸರಕಾರದ ಕ್ರಮವನ್ನು 200ಕ್ಕೂ ಅಧಿಕ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಬಹಿರಂಗ ಪತ್ರದ ಮೂಲಕ ಪ್ರಶ್ನಿಸಿರುವುದು ಸಮಂಜಸ. ಸೂರ್ಯನ ಕಿರಣಗಳನ್ನು ಕನ್ನಡಿ ಮತ್ತು ಮಸೂರಗಳನ್ನು ಬಳಸಿ ವಿಗ್ರಹದ ಮೇಲೆ ಬೆಳಕು ಹರಿಸುವ ಎಂಜಿನಿಯರಿಂಗ್ ಸಾಹಸವು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಲಿಕೆಯ ದೃಷ್ಟಿಯಿಂದ ಒಳ್ಳೆಯದೇ ಆಗಿದೆ. ಆದರೆ, ಇದು ಮಾನವನ ಜ್ಞಾನದ ಅನ್ವೇಷಣೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಯಾವ ಕೊಡುಗೆಯನ್ನೂ ನೀಡುವುದಿಲ್ಲ ಎಂದು ಟೀಕಿಸಿದೆ. 

ಬಿಜೆಪಿ ಸರಕಾರದ ಒತ್ತಡಕ್ಕೆ ಒಳಗಾದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‍ಐಆರ್) ತನ್ನ ಸಂಶೋಧನಾ ವಿಜ್ಞಾನಿಗಳು ಹಾಗೂ ಪ್ರಯೋಗಾಲಯವನ್ನು ಬಳಸಿ ಸೂರ್ಯನ ಕಿರಣಗಳನ್ನು ರಾಮನ ವಿಗ್ರಹದ ಮೇಲೆ ಬೀಳಿಸುವುದಾಗಿ ಟ್ವೀಟ್ ಮಾಡಿತ್ತು. ಇದು ಸಹಜವಾಗಿಯೇ ವೈಜ್ಞಾನಿಕ ಮನೋಭಾವ ಹೊಂದಿದ ಚಿಂತಕರು ಹಾಗೂ ವಿಜ್ಞಾನಿಗಳಲ್ಲಿ ಬೇಸರ ಮೂಡಿಸಿತ್ತು ಎಂದು ತಿಳಿಸಿದೆ.

ಫ್ಯಾಸಿಸ್ಟ್ ಸಂಸ್ಕೃತಿಯನ್ನು ಹರಡುವ ನಿಟ್ಟಿನಲ್ಲಿ ಸರಕಾರವು ವಿಜ್ಞಾನ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ವಿಜ್ಞಾನಿಗಳ ವಿರೋಧವನ್ನು ಪಕ್ಷವು ಸ್ವಾಗತಿಸುತ್ತದೆ. ಇದನ್ನು ಗಮನಿಸಿ ಕೇಂದ್ರ ಸರಕಾರ ಕೂಡಲೇ ತನ್ನ ನಡೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಪಕ್ಷವು ಒತ್ತಾಯಿಸಿದೆ.

Similar News