ಯಕ್ಷಗಾನದಿಂದ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ಸಾಧ್ಯ: ಕೃಷ್ಣಾಪುರ ಶ್ರೀ

ಉಡುಪಿಯಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ

Update: 2022-11-27 13:35 GMT

ಉಡುಪಿ: ಯಕ್ಷಗಾನ ಸೇರಿದಂತೆ ಎಲ್ಲ ಕಲೆಗಳು ಸಂಸ್ಕೃತಿ ಹಾಗೂ ನೀತಿಯನ್ನು ಪ್ರಚಾರ ಪಡಿಸುವ ಪ್ರಕಾರ ಗಳಾಗಿವೆ. ಈ ಕಲೆಗಳ ಮೂಲಕ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಶ್ರೀಕೃಷ್ಣಾಪುರ ಮಠ, ಶ್ರೀಕೃಷ್ಣ ಮಠ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ಉಡುಪಿ ಮಠದ ರಾಜಾಂಗಣದಲ್ಲಿ ಡಿ.11ರವರೆಗೆ ನಡೆಯಲಿರುವ ಕಿಶೋರ ಯಕ್ಷಗಾನ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಯಕ್ಷಗಾನ ನಮ್ಮ ಮಣ್ಣಿನ ಕಲೆ. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಯಕ್ಷಗಾನ ದಂತಹ ನಾಡಿನ ಕಲೆಗಳನ್ನು ಕಲಿಸುವುದರಿಂದ ಅವರಲ್ಲಿ ಅದರ ಬಗ್ಗೆ ಒಲವು ಹಾಗೂ ಅಭಿರುಚಿ ಮೂಡಲು ಸಾಧ್ಯವಾಗುತ್ತದೆ. ಈ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೆ ಅವರು ದೊಡ್ಡ ಕಲಾವಿದರಾಗಿ ಬೆಳೆಯಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ. ಬೀ.ವಿಜಯ ಬಲ್ಲಾಳ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಉಪಸ್ಥಿತರಿದ್ದರು.

ಉಡುಪಿ ಶಾಸಕ ಹಾಗೂ ಟ್ರಸ್ಟ್‌ನ ಅಧ್ಯಕ್ಷ ಕೆ.ರಘುಪತಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ಮಾಯಾಪುರಿ ಮಹಾತ್ಮ್ಯೆ ಹಾಗೂ ಇಂದಿರಾನಗರದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.

Similar News